ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಕ್ಷಣ. ದೇಶ 75ನೇ ಸ್ವಾತಂತ್ರೋತ್ಸವ ಆಚರಣೆ ಸಂಭ್ರಮದಲ್ಲಿದ್ದು, ನಾವು ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ನಮ್ಮ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ 1 ಲಕ್ಷ ಜನ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ನಾನು ಅಭಿನಂದಿಸುತ್ತೇನೆ. ಜನರಿಂದ ಇಷ್ಟು ದೊಡ್ಡ ಪ್ರತಿಕ್ರಿಯೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ನಾನು 75 ಸಾವಿರ ಜನರ ನಿರೀಕ್ಷೆ ಇಟ್ಟುಕೊಂಡಿದ್ದೆ. ಈ ನಿರೀಕ್ಷೆ ಮೀರಿ ಜನ ನಮ್ಮ ಜತೆ ಹೆಜ್ಜೆ ಹಾಕಲು ಉತ್ಸುಕರಾಗಿದ್ದಾರೆ ಎಂದರು. ನಾವು 1.5 ಲಕ್ಷ ಬಾವುಟಗಳನ್ನು ಖರೀದಿಸಿದ್ದು,ಇದನ್ನು ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ವಿತರಿಸಿ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ನಿಂದ ಬೃಹತ್ ಸ್ವಾತಂತ್ರ್ಯ ನಡಿಗೆ :ಇವರೆಲ್ಲರ ಜತೆ ನಾನು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಹೆಜ್ಜೆ ಹಾಕುತ್ತೇನೆ. ಬನ್ನಿ ನಾವೆಲ್ಲರೂ ದೇಶದ ಸ್ವಾತಂತ್ರ್ಯವನ್ನು ಗೌರವ ಹಾಗೂ ಸಂಭ್ರಮದಿಂದ ಆಚರಿಸೋಣ. ಈ ಕಾರ್ಯಕ್ರಮದಿಂದ ನಾಳೆ ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪ್ರವೇಶಿಸುವ ಐದು ಮಾರ್ಗಗಳಿಗೆ ಮೆಟ್ರೋ ಮೂಲಕ ಆಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.