ಬೆಂಗಳೂರು: ಕೋವಿಡ್ 2ನೇ ಅಲೆಯಲ್ಲಿ ಆಗಿರುವ ನಷ್ಟಕ್ಕೆ ರೈತರಿಗೆ ಸರ್ಕಾರದಿಂದ ಈವರೆಗೂ ಪರಿಹಾರ ಸಿಕ್ಕಿಲ್ಲ. ಬೆಳೆಗೆ ಬೆಲೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಸರ್ಕಾರ ಇದ್ಯಾವುದರ ಬಗ್ಗೆಯೂ ಚಿಂತಿಸದೇ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹೊಸ ಸರ್ಕಾರ ಬಂದಿದೆ. ಜನರ ರಕ್ಷಣೆ ಮಾಡುತ್ತದೆ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ. ಹಾರ-ತುರಾಯಿ ಹಾಕಿಸಿಕೊಳ್ಳುವವರಿಗೆ ನಾನು ಬೇಡ ಎನ್ನುವುದಿಲ್ಲ. ಕೋವಿಡ್ ಸೋಂಕು ನಿಯಂತ್ರಿಸಬೇಕು. ಎಲ್ಲರೂ ತಮ್ಮ ಕ್ಷೇತ್ರಗಳಿಗೆ ಹೋಗಿ ಎಂದು ಸಿಎಂ ಸೂಚಿಸಿದ್ದಾರೆ.
ಈ ವಿಚಾರವಾಗಿ ನಾನು ಇಲ್ಲಿ ಮಾತನಾಡುವುದಿಲ್ಲ. ಎಲ್ಲಿ ಹೋದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ, ಅವರು ಬೆಳೆದ ಟೊಮ್ಯಾಟೊ, ತರಕಾರಿಗಳಿಗೆ ಬೆಲೆ ಸಿಗದೇ ಬಿಸಾಕುತ್ತಿದ್ದಾರೆ. ನೂತನ ಮುಖ್ಯಮಂತ್ರಿಗಳು ಬಂದಿದ್ದಾರೆ, ಅವರಾದರೂ ರೈತರು, ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವವರನ್ನು ಉಳಿಸುತ್ತಾರಾ ನೋಡಬೇಕು ಎಂದರು.
ಜಗದೀಶ್ ಶೆಟ್ಟರ್ ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚಿಂತನೆ ಮಾಡಬೇಕಿದೆ, ಅಧಿವೇಶನ ಕರೆಯುತ್ತೇವೆ ಎಂದಿದ್ದರು. ಈಗ ಉತ್ತರ ಕರ್ನಾಟಕ ಭಾಗದ ಮುಖ್ಯಮಂತ್ರಿಗಳೇ ಇದ್ದಾರೆ. ಯಾವಾಗ ಕರೆಯುತ್ತಾರೋ ನೋಡೋಣ. ತರಾತುರಿಯಲ್ಲಿ ನಾನು ಮಾತನಾಡುವುದಿಲ್ಲ. ಜಮೀರ್ ಅವರ ಜತೆ ನನ್ನ ಅನುಭವವನ್ನು ಖಾಸಗಿಯಾಗಿ ಹಂಚಿಕೊಳ್ಳಲು ಸಿದ್ಧ.
ಇನ್ನು, ನಮ್ಮ ನಾಯಕರ ಮನೆ ಮೇಲೆ ಇಡಿ ದಾಳಿ ಬಗ್ಗೆ ನನಗೆ ಇರುವ ಕಾನೂನು ಅರಿವಿನ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನಾನು ಈ ಬಗ್ಗೆ ವೈಯಕ್ತಿಯವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಖಾಸಗಿಯಾಗಿ ನನ್ನ ಅನುಭವವನ್ನು ಅವರೊಟ್ಟಿಗೆ ಹಂಚಿಕೊಳ್ಳಲು ಸಿದ್ಧನಿದ್ದೇನೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುರಿತಾಗಿ ಜಮೀರ್ ಅವರು ಮಾಡಿರುವ ಆರೋಪಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅವರು ಇವರ ಬಗ್ಗೆ ಹೇಳಿದರೆ, ಇವರು ಅವರ ಬಗ್ಗೆ ಮಾತನಾಡಿದರೆ, ನೀವು ಅವರನ್ನೇ ಕೇಳಬೇಕು. ಆ ವಿಚಾರವಾಗಿ ನನ್ನನ್ನು ಯಾಕೆ ಪ್ರಶ್ನಿಸುತ್ತಿದ್ದೀರಿ? ಎಂದರು.
ಕೋವಿಡ್ ತಡೆಯುವ ಶಕ್ತಿ ಕೇಂದ್ರ, ರಾಜ್ಯ ಸರ್ಕಾರಕ್ಕಿತ್ತು :ನಗರದ ರಾಜಾಜಿನಗರ ವಿಧಾನಸಭೆ ಕ್ಷೇತ್ರದ ಶಿವನಗರದಲ್ಲಿ ಹಮ್ಮಿಕೊಂಡಿದ್ದ ಬಡವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಕಳೆದ ಎರಡು-ಮೂರು ತಿಂಗಳಿಂದ ಐದಾರು ಕಡೆಗಳಲ್ಲಿ ನಾನು ಹಾಗೂ ಸಿದ್ದರಾಮಯ್ಯ ಅವರು ಆಹಾರ ಕಿಟ್ ಹಂಚಿಕೊಂಡು ಬಂದಿದ್ದೇವೆ. ಪದ್ಮಾವತಿ ಅವರು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ.
ಸತತ ಮೂರು ತಿಂಗಳಿಂದ ಊಟ, ಆಹಾರ ಕಿಟ್ ಹಂಚುತ್ತಾ ಬಂದಿದ್ದಾರೆ. ಇಂದು 5 ಸಾವಿರ ಜನಕ್ಕೆ ಆಹಾರ ಕಿಟ್ ನೀಡುತ್ತಿದ್ದಾರೆ. ಪದ್ಮಾವತಿ ಅವರು ಮಂತ್ರಿಯಲ್ಲ, ಶಾಸಕಿಯಲ್ಲ. ಅವರ ಬಳಿ ಯಾವುದೇ ಅಧಿಕಾರವಿಲ್ಲ. ಆದರೂ ನಿಮ್ಮ ಸೇವೆಗೆ ಸದಾ ಸಿದ್ಧರಿದ್ದಾರೆ. ಅವರು ಸಾಮಾನ್ಯ ಜನರಂತೆ ಬದುಕುತ್ತಿದ್ದಾರೆ. ರಾಜಾಜಿನಗರ ಕ್ಷೇತ್ರದ ಜನರಿಗೆ ಸಹಾಯ ಮಾಡಬೇಕು ಎಂದು ತೀರ್ಮಾನಿಸಿ ಇಂದು ಈ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು.
ಈ ಕೋವಿಡ್ ಮಾರಿಯನ್ನು ನಾವು ತಂದಿದ್ದಲ್ಲ. ವಿದೇಶದಿಂದ ಬರುತ್ತಿದ್ದ ಸೋಂಕನ್ನು ಬಿಜೆಪಿ ಸರ್ಕಾರ ನಿಲ್ಲಸಬಹುದಿತ್ತು. ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. 1 ಕೋಟಿ ಜನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 4 ಕೋಟಿ ಉದ್ಯೋಗ ಕಳೆದುಕೊಂಡಿದ್ದಾರೆ. ಬಾಡಿಗೆ, ಅಂಗಡಿ, ವ್ಯಾಪಾರ, ಕೂಲಿ ಇಲ್ಲವಾಗಿದೆ. ರೈತನ ಬೆಳೆಗೆ ಬೆಲೆ ಸಿಗಲಿಲ್ಲ. ಪ್ರಧಾನಿ ಮೋದಿ ಅವರು ನಿಮ್ಮ ಕೈಯಲ್ಲಿ ದೀಪ ಹಚ್ಚಿಸಿದರು, ಚಪ್ಪಾಳೆ, ಜಾಗಟೆ ಬಾರಿಸಲು ಹೇಳಿದರು. ಚುನಾವಣೆಗೂ ಮುನ್ನ ಅಚ್ಛೇ ದಿನ ಬರುತ್ತದೆ ಎಂದರು.
ಬೀದಿಯಲ್ಲಿ ನಿಲ್ಲಿಸಿರುವುದೇ ಅಚ್ಛೇ ದಿನವಾ? :ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏನಾಯ್ತು? ಎಲ್ಲವೂ ಹೆಚ್ಚಾಯ್ತು. ಜನರಿಗೆ ಯಾವುದೇ ನೆರವಿಲ್ಲ. ಬೀದಿ ವ್ಯಾಪಾರಿ, ಚಾಲಕರು, ಅಸಂಘಟಿತ ಕಾರ್ಮಿಕರಿಗೆ ಹಣ ಕೊಡಿ ಎಂದು ಹೋರಾಟ ಮಾಡಿದೆವು. ನಮ್ಮ ಒತ್ತಡಕ್ಕೆ 2, 3 ಹಾಗೂ 5 ಸಾವಿರ ರೂ. ಘೋಷಿಸಿದರು. ಯಾರಿಗಾದರೂ ಪರಿಹಾರ ಬಂದಿದ್ಯಾ..? ಯಾರಿಗೂ ಬಂದಿಲ್ಲ.
ಇದು ಸುರೇಶ್ ಕುಮಾರ್, ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರಿಗೆ ಗೊತ್ತಾಗಬೇಕು. ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಪಕೋಡಾ ಮಾರಲು ಹೇಳಿದರು. ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ, ಹಾಸಿಗೆ, ಆಕ್ಸಿಜನ್ ಕೊಡಲು ಆಗಲಿಲ್ಲ. ಈ ಸರ್ಕಾರ ಯಾಕಿರಬೇಕು? ನಾನು, ಸಿದ್ದರಾಮಯ್ಯ ಹಾಗೂ ಇತರೆ ನಾಯಕರು ಇಡೀ ರಾಜ್ಯದುದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದು, ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ಜನ ಕಾಯುತ್ತಿದ್ದಾರೆ ಎಂದರು.