ಬೆಂಗಳೂರು:ಮಲ್ಲಿಕಾರ್ಜುನ ಖರ್ಗೆ ಅವರು ಒಂದು ವೇಳೆ ಮುಖ್ಯಮಂತ್ರಿಯಾದರೆ ಅವರ ಜತೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಖರ್ಗೆ ಅವರು ನನ್ನ ನಾಯಕರು, ಅವರೇ ನನ್ನ ಅಧ್ಯಕ್ಷರು. ಖರ್ಗೆ ಅವರು ನನಗಿಂತ 20 ವರ್ಷಗಳ ಹಿರಿಯರು. ಅವರ ಹಿರಿತನ, ತ್ಯಾಗಕ್ಕೆ ನಾವು ಗೌರವ ನೀಡಬೇಕು ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಜ್ಯ ಹಾಗೂ ದೇಶಕ್ಕೆ ಆಸ್ತಿ. ಪಕ್ಷ ಯಾವ ತೀರ್ಮಾನ ಮಾಡುತ್ತದೆಯೋ ನಾನು ಅದಕ್ಕೆ ಬದ್ಧವಾಗಿರುತ್ತೇನೆ. ಅವರು ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿದ್ದಾರೆ. ಮಧ್ಯರಾತ್ರಿ ತಮ್ಮ ಶಾಸಕಾಂಗ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಲಾಕ್ ಅಧ್ಯಕ್ಷರು ಇಂದು ಎಐಸಿಸಿ ಅಧ್ಯಕ್ಷರಾಗಿದ್ದು, ಇದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ. ಖರ್ಗೆ ಅವರು ಮುಖ್ಯಮಂತ್ರಿಯಾದರೆ ಅವರ ಜತೆ ಸಂತೋಷದಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಪಕ್ಷದಲ್ಲಿ ಟಿಕೆಟ್ ಅಸಮಾಧಾನದ ಪ್ರತಿಕ್ರಿಯಿಸಿ, ನಾವು ಎಲ್ಲರ ಜತೆ ಮಾತನಾಡುತ್ತಿದ್ದೇವೆ. ರಾಜಕಾರಣದಲ್ಲಿ ಆಸೆ ಸಹಜ. ಈ ಸಂದರ್ಭದಲ್ಲಿ ನಾವು ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ. ರಾಜಕೀಯ ಎಂದರೆ ಅಧಿಕಾರ ಹಂಚಿ ಸಹಕಾರ ನೀಡುವುದಾಗಿದೆ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರವನ್ನು ಹಂಚಲಾಗುವುದು. ಈ ಕಾರಣಕ್ಕಾಗಿ ಎಲ್ಲರೂ ಸಮಾಧಾನವಾಗಿ ಇರಬೇಕು ಎಂದು ಕೇಳುತ್ತಿದ್ದೇವೆ. ತಮ್ಮ ಆಕ್ರೋಶ, ಅಭಿಮಾನ ತಪ್ಪೇನಿಲ್ಲ. ಐದಾರೂ ವರ್ಷಗಳಿಂದ ದುಡಿದಿರುತ್ತಾರೆ. ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟಾಗ ಅಸಮಾಧಾನ ಸಹಜ ಎಂದರು.
ವಿಶ್ವನಾಥ್ ಅವರು ಸೋಮವಾರ ಕಾಂಗ್ರೆಸ್ ಸೇರುತ್ತಿದ್ದಾರೆ - ಡಿಕೆಶಿ:ಬಿಜೆಪಿಯಲ್ಲಿ ಅಭ್ಯರ್ಥಿ ಪಟ್ಟಿ ಪ್ರಕಟವಾಗುವ ಮುನ್ನವೇ ಭಿನ್ನಮತವನ್ನು ನೀವು ಕಾಣುತ್ತಿದ್ದೀರಿ. ಬೆಳಗಾವಿ ಹಾಗೂ ಇತರೆ ಭಾಗಗಳಲ್ಲಿ ನೋಡುತ್ತಿದ್ದೀರಿ. ನಮ್ಮ ಪಕ್ಷದಲ್ಲಿ ಗೆಲುವಿನ ಸಾಮರ್ಥ್ಯ ಬಹಳ ಮುಖ್ಯ. ಆ ದೃಷ್ಟಿಯಿಂದ ನಾವು ಕೆಲವು ತೀರ್ಮಾನ ಕೈಗೊಂಡಿರುತ್ತೇವೆ. ಬಿಜೆಪಿಯಲ್ಲೂ ಹಾಲಿ ಶಾಸಕರುಗಳಿದ್ದರು. ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ವಿಶ್ವನಾಥ್ ಅವರು ಸೋಮವಾರ ಕಾಂಗ್ರೆಸ್ ಸೇರುತ್ತಿದ್ದಾರೆ. ವಿಶ್ವನಾಥ್ ಅವರು ಮೊನ್ನೆಯಷ್ಟೇ ಪಶ್ಚಾತಾಪ ಸತ್ಯಾಗ್ರಹ ಮಾಡಿದ್ದಾರೆ. ನಾವು ಕೆಲವರನ್ನು ಸಮಾಧಾನ ಪಡಿಸುತ್ತಿದ್ದೇವೆ ಎಂದು ಹೇಳಿದರು.
ಕುಮಾರಸ್ವಾಮಿ ಅವರಿಗೆ ನಮ್ಮ ಪಕ್ಷದ ಬಗ್ಗೆ ತಿಳಿದಿದೆಯಾ- ಡಿಕೆಶಿ ಪ್ರಶ್ನೆ.. ವರುಣಾ ಹಾಗೂ ಶಿಕಾರಿಪುರದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಅವರಿಗೆ ನಮ್ಮ ಪಕ್ಷದ ಬಗ್ಗೆ ತಿಳಿದಿದೆಯಾ? ಎಂದು ಪ್ರಶ್ನಿಸಿದರು.