ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಎರಡೇ ದಿನ ಬಾಕಿ ಇದೆ. ಈ ನಡುವೆ, "ಯಾರ ನೇತೃತ್ವದ ಕ್ಯಾಬಿನೆಟ್ ಎನ್ನುವ ವಿಚಾರ ಮೇ 15 ರಂದು ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡ್ತಾರೆ. ನಾವು 141 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. 15ನೇ ತಾರೀಖಿನಂದು ಕ್ಯಾಬಿನೆಟ್ನಲ್ಲಿ ನಾವು ಘೋಷಣೆ ಮಾಡಿರುವ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, "ನಾನು ಕನಕಪುರಕ್ಕೆ ಹೋಗ್ತಿದ್ದೀನಿ. ಮೂರು ಗಂಟೆಗೆ ಹೋಗಿ ಮನವಿ ಮಾಡಿ ಬರ್ತೀನಿ. ಈ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಕೊಡ್ತೀವಿ. ರೈತರಿಗೆ ಕರೆಗಳು ತುಂಬಿಸುತ್ತೇವೆ. ಹೆಣ್ಣು ಮಕ್ಕಳಿಗೆ ಹೆರಿಕೆ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ. ಎಲ್ಲರನ್ನೂ ಸಮಾನತೆಯಿಂದ ನೋಡುತ್ತೇವೆ. ಮಕ್ಕಳಿಗೆ ಗ್ರಾಮಗಳಲ್ಲಿ ಉತ್ತಮ ಶಿಕ್ಷಣ ನೀಡಿ ಸಿಟಿಗಳಿಗೆ ಬರೋದನ್ನು ತಪ್ಪಿಸುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ :ನಾನೇ ಮುಂದಿನ ಸಿಎಂ , ಮೊದಲ ಕ್ಯಾಬಿನೆಟ್‌ನಲ್ಲೇ ಗ್ಯಾರಂಟಿಗಳಿಗೆ ಅನುಮೋದನೆ : ಡಿಕೆಶಿ
ಕಾಂಗ್ರೆಸ್ಗೆ ಚುನಾವಣಾ ಆಯೋಗ ನೋಟಿಸ್ ವಿಚಾರ ಮಾತನಾಡಿ, "ನನಗೆ ನೋಟಿಸ್ ನೀಡಿದ್ರು. ದಾಖಲೆ ಎನು ಅಂತ ಹೇಳಿದ್ರು. ನಾನು ಚುನಾವಣಾ ಆಯೋಗಕ್ಕೆ ಉತ್ತರ ಕೊಟ್ಟಿದ್ದೀನಿ. ಈಗ ಅದಕ್ಕೆ ಆಧಾರ ಏನು ಅಂತ ಕೇಳಿದ್ದಾರೆ. ಹಾಗೆಯೇ ಯತ್ನಾಳ್ ಸಾಹೇಬ್ರ ಹೇಳಿಕೆ, ಬೇರೆ ಬೇರೆ ಪೇಪರ್ನಲ್ಲಿ ಬರೆದಿದ್ದು. ವಿಶ್ವನಾಥ್ ಹೇಳಿದ್ದು, ಗೂಳಿಹಟ್ಟಿ ಶೇಖರ್ ಹೇಳಿದ್ದು ಮತ್ತು ಓಲೇಕರ್ ಹೇಳಿದ್ದು, ಯೋಗೀಶ್ವರ್ ಹೇಳಿದ್ದು ಎಲ್ಲಾ ಹೇಳಿಕೆಗಳನ್ನು ಆಯೋಗಕ್ಕೆ ಕೊಡುತ್ತೇವೆ. ಕೇಂದ್ರ ಗೃಹ ಮಂತ್ರಿ ಅಮಿಶ್ ಶಾ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಆಗುತ್ತದೆ ಅಂತ ಹೇಳಿದ್ರು, ಅವರಿಗೆ ಮೊದಲು ನೋಟಿಸ್ ನೀಡಬೇಕು ಅಲ್ವಾ" ಎಂದು ಪ್ರಶ್ನಿಸಿದರು.