ಬೆಂಗಳೂರು: ಜನರನ್ನು ಹೇಗೆಲ್ಲಾ ದಾರಿ ತಪ್ಪಿಸಬಹುದು ಎಂಬುದರ ಬಗ್ಗೆ ಪಿಎಚ್ಡಿ ಮಾಡಿ ಈ ಬಜೆಟ್ ರೂಪಿಸಿದಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಮಂಡಿಸಿದ ಹಣಕಾಸು ಬಜೆಟ್ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಕೇಂದ್ರದ ನೆರವೂ ಸಿಕ್ಕಿಲ್ಲ. ಜಿಎಸ್ಟಿ ಸಾಲ ಅನಿವಾರ್ಯವಾಗಿದೆ ಎಂಬುದನ್ನು ಸಿ.ಎಂ ಯಡಿಯೂರಪ್ಪ ಅವರು ಭಾಷಣದ ಆರಂಭದಲ್ಲೇ ವಿವರಿಸಿದ್ದಾರೆ. ಕಳೆದ ವರ್ಷ ಮಾಡಿಕೊಂಡಿರುವ ಸಾಲವನ್ನೇ ತೀರಿಸಲು ಆಗಿಲ್ಲ. ಈಗ ಹೊಸದಾಗಿ 70 ಸಾವಿರ ಕೋಟಿ ರೂ. ಸಾಲದ ಹೊರೆ ರಾಜ್ಯದ ಜನರ ತಲೆ ಮೇಲೆ ಬೀಳಲಿದೆ. "ಸಾಲ ಮಾಡಿ ತುಪ್ಪ ತಿನ್ನು" ಎಂದು ಸಾಲಗಾರರನ್ನು ಅಣಕಿಸುವ ಮಾತಿದೆ. ಆದರೆ ಈ ಸರ್ಕಾರ ಸಾಲ ಮಾಡಿ ಜನರಿಗೆ ಮಣ್ಣು ತಿನ್ನಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಗುಂಪಲ್ಲಿ ಗೋವಿಂದಾ...
ರಾಜ್ಯಗಳ ಜಿಎಸ್ಟಿ ಪಾಲು ಹಂಚುವಾಗ ಗುಜರಾತ್, ಅಸ್ಸೋಂ ಮತ್ತಿತರ ರಾಜ್ಯಗಳ ಕಣ್ಣಿಗೆ ಬೆಣ್ಣೆ ಹಚ್ಚಿದ ಕೇಂದ್ರ ಸರ್ಕಾರ ರಾಜ್ಯದ ಕಣ್ಣಿಗೆ ಸುಣ್ಣ ಸುರಿದಿದೆ. ಅದನ್ನು ರಾಜ್ಯ ಸರ್ಕಾರವಾಗಲಿ ರಾಜ್ಯದಿಂದ ಕೇಂದ್ರ ಪ್ರತಿನಿಧಿಸುತ್ತಿರುವ ಎರಡು ಡಜನ್ ಸಂಸದರು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಅದರ ಫಲವೇ ಈಗ ರಾಜ್ಯದ ಜನರ ತಲೆ ಮೇಲೆ ಬೀಳುತ್ತಿರುವ ಸಾಲದ ಹೊರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವೈಜ್ಞಾನಿಕ ಲಾಕ್ ಡೌನ್ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡಿಸಿದೆ ಎಂಬುದನ್ನು ಮುಖ್ಯಮಂತ್ರಿಗಳೇ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ವಿವರಿಸಿದ್ದಾರೆ. ಆದರೂ ಜನರ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ಘೋಷಣೆಗಳ ಮೇಲೆ ಘೋಷಣೆಗಳನ್ನು ಸಿಎಂ ಪ್ರಕಟಿಸಿದ್ದಾರೆ. ಆದರೆ, ಇದಕ್ಕೆ ಸಂಪನ್ಮೂಲ ಕ್ರೋಡೀಕರಣ ಹೇಗೆ? ಎಲ್ಲಿಂದ ದುಡ್ಡು ತರುತ್ತಾರೆ ಎಂಬುದನ್ನೇ ಹೇಳಿಲ್ಲ. ಹೀಗಾಗಿ ಈ ಘೋಷಣೆಗಳೆಲ್ಲ ಘೋಷಣೆಯಾಗಿಯೇ ಉಳಿದುಕೊಳ್ಳುವ ಅಪಾಯವಿದೆ. ಪ್ರತಿ ಬಾರಿ ಬಜೆಟ್ ಮಂಡಿಸುವಾಗ ಇಲಾಖೆವಾರು ಅನುದಾನ ಹಂಚಿಕೆ ಮಾಡಲಾಗುತ್ತದೆ. ಆಗ ಯಾವ ಇಲಾಖೆಗೆ ಏನು, ಎಷ್ಟು? ಎಂಬುದು ತಿಳಿಯುತ್ತದೆ. ಆದರೆ ಈಗ ಸರ್ಕಾರ ವಲಯವಾರು ಘೋಷಣೆ ಮಾಡಿ "ಗುಂಪಲ್ಲಿ ಗೋವಿಂದಾ" ಎನ್ನುವಂತೆ ಜನರ ಕಣ್ಣಿಗೆ ಮಣ್ಣೆರಚಿದೆ ಎಂದು ಆರೋಪಿಸಿದ್ದಾರೆ.