ಬೆಂಗಳೂರು: ನಮ್ಮ ನಾಯಕರಿಗೇಕೆ ಈ ರೀತಿ ಕಿರುಕುಳ ಕೊಡುತ್ತಿದ್ದಾರೋ ಗೊತ್ತಿಲ್ಲ. ಎಲ್ಲದರ ಬಗ್ಗೆ ಮಾತನಾಡಬೇಕಿದೆ, ಚರ್ಚೆ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಮೇಕೆದಾಟು ಪಾದಯಾತ್ರೆ ಹಾಗೂ ಕೃಷಿ ಕಾಯ್ದೆ ವಿರುದ್ಧ ನಡೆಸಿದ್ದ ಪ್ರತಿಭಟನೆ ಸಂಬಂಧದ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಅವರು ಇಂದು ಕೋರ್ಟ್ಗೆ ಹಾಜರಾಗಿದ್ದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಈಗೇಕೆ 10 ಲಕ್ಷ ಉದ್ಯೋಗ ಕೊಡುತ್ತೇವೆಂದು ಹೇಳುತ್ತಿರೋದು, 8 ವರ್ಷದಿಂದ 16 ಕೋಟಿ ಉದ್ಯೋಗವನ್ನೇಕೆ ನೀಡಲಿಲ್ಲ?. 40% ಕಮಿಶನ್ ವಿಚಾರದ ಬಗ್ಗೆ ಪಿಎಂ ಮೋದಿ ಏಕೆ ಮಾತನಾಡುತ್ತಿಲ್ಲ. ಬಿಜೆಪಿ ನಿಲುವು ಜನರಿಗೆ ಅರ್ಥವಾಗುತ್ತಿದೆ. ದ್ವೇಷ ರಾಜಕಾರಣದಿಂದ ನಮ್ಮ ನಾಯಕರನ್ನು ಮುಗಿಸಲು ಹೊರಟಿದ್ದಾರೆಂದು ಕಿಡಿಕಾರಿದರು.
ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್ ಮಾಡಲು ಮುಂದಾದರೆ ನಾವು ಹೋಗಿ ಅಲ್ಲೇ ಮಲಗುತ್ತೇವೆ. ಉತ್ತರಪ್ರದೇಶದಲ್ಲಿ ಮಾಡಿದರೆಂದು ಕರ್ನಾಟಕದಲ್ಲಿ ಮಾಡಲು ಆಗಲ್ಲ. ಇಲ್ಲಿ ಕಾನೂನು ಇದೆ. ಇವರು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿ ಈ ರೀತಿಯ ಕೆಲಸ ಮಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.