ಬೆಂಗಳೂರು:ಡಿಸಿಎಂ ಅಶ್ವತ್ಥ್ ನಾರಾಯಣ್ಗೆ ಕೋಪ ಇದ್ದರೆ ನಮ್ಮ ಮೇಲೆ ತೀರಿಸಿಕೊಳ್ಳಲಿ. ಅದು ಬಿಟ್ಟು ರಾಮನಗರಕ್ಕೆ ಪಾದರಾಯನಪುರ ಆರೋಪಿಗಳನ್ನು ಶಿಫ್ಟ್ ಮಾಡಿ ಜನರಿಗೆ ಯಾಕೆ ತೊಂದರೆ ಕೊಡುತ್ತಿದ್ದೀರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಾದರಾಯನಪುರ ಸೋಂಕಿತ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯಿಂದ ನನಗೆ ಭಾರೀ ನೋವಾಗುತ್ತಿದೆ. ರಾಮನಗರ ಗ್ರೀನ್ ಝೋನ್ ಇದ್ದರೂ ಏಕೆ ತೊಂದರೆ ಕೊಡುತ್ತಾ ಇದ್ದೀರಾ ಅಂತ ಎಲ್ಲರೂ ಕೇಳಿದ್ದೆವು. ಆದರೂ ಆರೋಪಿಗಳನ್ನು ಸ್ಥಳಾಂತರ ಮಾಡಿದ್ದಾರೆ. ಇದರಿಂದ ಅಲ್ಲಿನ ಜನ ದಂಗೆ ಎದ್ದು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ರಾಮನಗರ ಜಿಲ್ಲೆಯಲ್ಲಿ ಯಾರೂ ಬಿಜೆಪಿ ಶಾಸಕರು ಇಲ್ಲ ಎಂದು ನಮ್ಮ ಜಿಲ್ಲೆಗೆ ಸೋಂಕು ಹಂಚುತ್ತಿದ್ದಾರೆ. ಜಿಲ್ಲೆಯನ್ನು ಗ್ರೀನ್ ಝೋನ್ ಆಗಿರಲು ಬಿಟ್ಟುಬಿಡಿ. ಡಿಸಿ, ಎಸ್ಪಿ, ಜಿಲ್ಲಾ ಉಸ್ತುವಾರಿ ಸಚಿವರು ಪಾದರಾಯನಪುರ ಆರೋಪಿಗಳು ಸ್ಥಳಾಂತರ ಮಾಡಲು ಏಕೆ ಒಪ್ಪಿದರೋ ಗೊತ್ತಿಲ್ಲ. ಸೋಂಕಿತರನ್ನು ಮನೆಯಲ್ಲಾದರೂ ಇಡಿ, ಮಲ್ಲೇಶ್ವರಂನಲ್ಲಾದರೂ ಇಡಲಿ ಎಂದು ಅಶ್ವತ್ಥ್ ನಾರಾಯಣ್ಗೆ ಟಾಂಗ್ ನೀಡಿದರು.
ಅಕ್ಕಿಯ ಅಕ್ರಮ ಮಾರಾಟ:
ಕೇಂದ್ರ ಸರ್ಕಾರ ಕೊಡುವ ಉಚಿತ ಪಡಿತರ ಅಕ್ಕಿ ಹರಿಯಾಣದಿಂದ ಬಂದಿದ್ದು, ಅದನ್ನು ಮೊಟಕು ಮಾಡಿ ತಮಿಳುನಾಡಿಗೆ ಬಿಜೆಪಿ ಕಾರ್ಯಕರ್ತರು ಮಾರಾಟ ಮಾಡುತ್ತಿದ್ದಾರೆ. ಸುಮಾರು 1879 ಕ್ವಿಂಟಾಲ್ ಅಕ್ಕಿಯನ್ನು ಒಂದು ಗೋಡೌನ್ನಲ್ಲಿ ಸಂಗ್ರಹಿಸಿಟ್ಟಿದ್ದು, ಬಿಜೆಪಿ ಕಾರ್ಯಕರ್ತರು ತಮಿಳುನಾಡಿನ ಹೊಸೂರಿನ ವರ್ತಕರನ್ನು ಕರೆತಂದು ವ್ಯಾಪಾರ ಮಾಡಿದ್ದಾರೆ. ಈ ಅಕ್ಕಿಯನ್ನು ಸರ್ಜಾಪುರದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇದನ್ನು ಕಾಂಗ್ರೆಸ್ ಕಾರ್ಯಕರ್ತರೇ ಬಯಲು ಮಾಡಿದ್ದು, ಪ್ರಕರಣ ಬೆಳಕಿಗೆ ಬಂದಿದ್ದರೂ ಈವರೆಗೆ ಯಾರನ್ನೂ ಬಂಧಿಸಿಲ್ಲ. ಮಂತ್ರಿಯೊಬ್ಬರ ಒತ್ತಡಕ್ಕೆ ಮಣಿದು ಕ್ರಮ ಕೈಗೊಳ್ಳುತ್ತಿಲ್ಲ. ಸಿಎಂ ಅವರೇ ಇದು ನಿಮ್ಮ ಕುತ್ತಿಗೆಗೇ ಬರುತ್ತದೆ. ಇದು ಪ್ರಧಾನಿ ಕೊಡುತ್ತಿರುವ ಉಚಿತ ಪಡಿತರ ಅಕ್ಕಿಯಾಗಿದೆ ಎಂದು ತಿಳಿಸಿದರು.
ಕಾಳಸಂತೆಯಲ್ಲಿ ಪಡಿತರ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ಮಾಡಬೇಕು. ಸಿಎಂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ನಾನು ಹೇಳುವುದಿಲ್ಲ. ಅವರಿಗೆ ಗೊತ್ತಿಲ್ಲದೆ ನಡೆಯುತ್ತಿದೆ. ಈ ಸಂಬಂಧ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಬ್ಯಾಂಕಿನವರು ಆರ್ಬಿಐ ನಿರ್ದೇಶನ ಪಾಲಿಸದೆ ಜನಸಾಮಾನ್ಯರು, ಕೈಗಾರಿಕೋದ್ಯಮಿಗಳನ್ನು ಲೂಟಿ ಮಾಡುತ್ತಿದ್ದಾರೆ. ಮೂರು ತಿಂಗಳ ಮುಂಚೆಯೇ ಬ್ಯಾಂಕ್ನವರು ಹಣ ವಸೂಲಿ ಮಾಡುತ್ತಿದ್ದಾರೆ. ಸಿಎಂ ಈ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಲು ವಿಫಲರಾಗಿದ್ದಾರೆ. ಬ್ಯಾಂಕಿನವರಿಗೆ ಈವರೆಗೆ ಆರ್ಬಿಐ ಸೂಚನೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದರು.