ನವದೆಹಲಿ/ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ದೆಹಲಿಯಲ್ಲಿ ಗುರುವಾರ ಭೇಟಿಯಾದರು. ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳಲ್ಲಿನ ಕೋವಿಡ್ ದುಃಸ್ಥಿತಿ ಕುರಿತು ಚರ್ಚೆ ನಡೆಸಿದರು.
ದೆಹಲಿ ಪ್ರವಾಸದಲ್ಲಿರುವ ಡಿಕೆಶಿ ಅವರು ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಕಮಲ್ ನಾಥ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲಿ ಉಭಯ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಕೋವಿಡ್ ಪರಿಸ್ಥಿತಿಯ ಸತ್ಯಾಂಶ ಮುಚ್ಚಿಟ್ಟು, ಸುಳ್ಳು ಮಾಹಿತಿ ಮೂಲಕ ಜನರನ್ನು ದಾರಿತಪ್ಪಿಸುತ್ತಿರುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಕೋವಿಡ್ ಸಾವಿನ ಪ್ರಮಾಣ ಕುರಿತು ಸರ್ಕಾರಗಳು ಸುಳ್ಳು ಲೆಕ್ಕ ನೀಡುತ್ತಿವೆ. ಸರ್ಕಾರ ಹೇಳುತ್ತಿರುವ ಅಂಕಿ - ಅಂಶಕ್ಕೂ ಚಿತಾಗಾರದಲ್ಲಿ ಅಂತ್ಯಸಂಸ್ಕಾರಗೊಂಡ ಶವಗಳ ಸಂಖ್ಯೆಗೂ ಅಜಗಜಾಂತರವಿದೆ. ಕೋವಿಡ್ನಿಂದ ಸತ್ತವರ ಮಾಹಿತಿಯನ್ನು ಸ್ಮಶಾನ, ಚಿತಾಗಾರಗಳಿಂದ ಪಡೆಯುವಂತಹ ದುಃಸ್ಥಿತಿ ನಿರ್ಮಾಣವಾಗಿದೆ ಎಂಬ ಅಂಶವನ್ನು ಶಿವಕುಮಾರ್ ಅವರು ಗಮನಕ್ಕೆ ತಂದಿದ್ದಾರೆ.