ಬೆಂಗಳೂರು: ಬಿಡಬ್ಲ್ಯೂ ಎಸ್ಎಸ್ಬಿ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಇಲ್ಲಿ ಸಂಪನ್ಮೂಲ ಕ್ರೂಢೀಕರಣ ಆಗಬೇಕಿದೆ. ಇಲ್ಲದಿದ್ದರೆ ಇಂತಹ ಸಂಸ್ಥೆ ಉಳಿಯಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾವೇರಿ ಭವನದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಚೇರಿಯಲ್ಲಿ ನಿನ್ನೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2014 ರಿಂದ ಇಲ್ಲಿಯವರೆಗೂ ನೀರಿನ ದರ ಪರಿಷ್ಕರಣೆಯಾಗಿಲ್ಲ.
ಸಂಸ್ಥೆಯಲ್ಲಿ ವೇತನ ಹಾಗೂ ವಿದ್ಯುತ್ ಬಿಲ್ ಪಾವತಿಗೆ ಹಣವಿಲ್ಲದಂತಾಗಿದೆ. ಇಲ್ಲಿನ ಸಿಬ್ಬಂದಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಈ ಸಂಸ್ಥೆಯ ಅಧಿಕಾರಿಗಳು ಅಕ್ರಮ ನೀರಿನ ಸಂಪರ್ಕವನ್ನು ಶೇ 48ರಿಂದ ಶೇ 28 ಇಳಿಸಿದ್ದಾರೆ. ಈ ಅನಧಿಕೃತ ನೀರಿನ ಸಂಪರ್ಕದ ಬಗ್ಗೆ ನನಗೆ ವರದಿ ನೀಡಿದ್ದು, ಎಲ್ಲೆಲ್ಲಿ ಅನಧಿಕೃತ ಸಂಪರ್ಕ ಇದೆ ಎಂದು ಪತ್ತೆಹಚ್ಚಲು ಹೇಳಿದ್ದೇನೆ. ಈ ಸಂಸ್ಥೆಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡಲಾಗುತ್ತಿದೆ. ಆದರೂ ಬರುವ 104 ಕೋಟಿಯಲ್ಲಿ 90 ರಿಂದ 95 ಕೋಟಿಯಷ್ಟು ವಿದ್ಯುತ್ ಬಿಲ್ ಪಾವತಿಸುವಂತಾಗಿದೆ ಎಂದು ಹೇಳಿದರು.
ಬೆಂಗಳೂರಿನ ಜನರಿಗೆ ಬಹಳ ಸ್ವಚ್ಛವಾದ ನೀರನ್ನು ಪೂರೈಸಬೇಕು. ಇದಕ್ಕಾಗಿ ಎಲ್ಲೆಲ್ಲಿ ಸ್ವಚ್ಛ ನೀರು ನೀಡಲು ಸಾಧ್ಯವಾಗುತ್ತಿಲ್ಲವೋ, ಅಲ್ಲಿ ನೀರಿನ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ನೂತನ ದರದ ವಿಚಾರವಾಗಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು. ಪಾಲಿಕೆಯಿಂದ ಈ ಸಂಸ್ಥೆಗೆ ಬರಬೇಕಾದ ಹಣ ಸರಿಯಾಗಿ ಬಂದಿಲ್ಲ. ಈ ವಿಚಾರವಾಗಿ ನಾನು ಗಮನಹರಿಸುತ್ತೇನೆ. ಈ ಸಂಸ್ಥೆ ಮತ್ತೆ ಆರೋಗ್ಯಕರವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.