ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ವಿವಿಧ ಮುಖಂಡರ ಜೊತೆ ಸಭೆ ನಡೆಸಿದರು. ಬೆಳಗ್ಗೆ ತಮ್ಮ ಸದಾಶಿವನಗರದ ನಿವಾಸದಲ್ಲಿ ವಿವಿಧ ಸಭೆ ನಡೆಸಿದ್ದ ಶಿವಕುಮಾರ್, ಮಧ್ಯಾಹ್ನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಎರಡು ಪ್ರಮುಖ ಸಭೆ ನಡೆಸಿದ್ದಾರೆ.
ಮೊದಲು ಅವರು ವಿಜಯನಗರ ಜಿಲ್ಲೆ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು. ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟು ಹೊಸದಾಗಿ ನಿರ್ಮಾಣವಾಗಿರುವ ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭೆ ಕ್ಷೇತ್ರವನ್ನು ಸದ್ಯ ಬಿಜೆಪಿ ಕರುಣಾಕರ ರೆಡ್ಡಿ ಪ್ರತಿನಿಧಿಸುತ್ತಿದ್ದಾರೆ. 2008ರಲ್ಲಿ ಶಾಸಕರಾಗಿದ್ದ ಕರುಣಾಕರ ರೆಡ್ಡಿ 2013ರಲ್ಲಿ ಮಾಜಿ ಸಿಎಂ ಎಂಪಿ ಪ್ರಕಾಶ್ ಅವರ ಪುತ್ರ ಎಂಪಿ ರವೀಂದ್ರ ವಿರುದ್ಧ ಸೋತಿದ್ದರು. 2018ರ ಚುನಾವಣೆಯಲ್ಲೂ ರವೀಂದ್ರ ಕಣಕ್ಕಿಳಿದಿದ್ದರು. ಆದರೆ, ಸೋಲನುಭವಿಸಿದ್ದರು. ಅದಾದ ಬಳಿಕ ಅನಾರೋಗ್ಯದ ಹಿನ್ನೆಲೆ ಅವರು ನಿಧನರಾಗಿದ್ದಾರೆ.
ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಗೆ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸಬೇಕಾಗಿದೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಐದು ಸಾರಿ ಗೆಲುವು ಸಾಧಿಸಿದ ಹಿರಿಮೆ ಕಾಂಗ್ರೆಸ್ಗೆ ಇದೆ. ಹಿಂದೆ ಜನ ಕೈಹಿಡಿದ ರೀತಿಯಲ್ಲೇ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸ ಇದೆ. ಇದರಿಂದಲೇ ಇಂದು ಡಿಕೆಶಿ ಇಲ್ಲಿನ ನಾಯಕರನ್ನು ಕರೆದು ಸಮಾಲೋಚಿಸಿದ್ದಾರೆ.