ಬೆಂಗಳೂರು: "ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಪ್ರಗತಿ ಎಂಬ ಮಾತನ್ನು ಆಗಾಗ ಹೇಳುತ್ತೇನೆ. 1991ರಿಂದ ಒಕ್ಕಲಿಗ ಸಮುದಾಯದ ಜನ ಅಮೆರಿಕದಲ್ಲಿ ಸಂಘಟನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೀರಿ. ಈ ವಿಶಿಷ್ಟ ಪ್ರಯತ್ನಕ್ಕೆ ಮುಂದಾದವರಿಗೆ ನಾನು ಅಭಿನಂದಿಸುತ್ತೇನೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಒಕ್ಕಲಿಗ ಪರಿಷತ್ ಆಫ್ ಅಮೆರಿಕದ 17ನೇ ಸಮ್ಮೇಳನದಲ್ಲಿ ವರ್ಚುವಲ್ ಮೂಲಕ ಶನಿವಾರ ಭಾಗವಹಿಸಿ ಅವರು ಮಾತನಾಡಿದರು. "ನೀವು ನಮ್ಮ ರಾಯಭಾರಿಗಳು. ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ನಮ್ಮ ಸಮಾಜ, ಮಠ, ಭಾಷೆ, ನೆಲ ಜಲ ಕಾಪಾಡಲು ಶ್ರಮಿಸಿ, ಹೊರ ದೇಶದಲ್ಲಿ ನಮಗೆ ಹೆಸರು ತಂದಿದ್ದೀರಿ. ಕೆಲ ದಿನಗಳಲ್ಲಿ ಅಧಿವೇಶನ ನಡೆಯಲಿದ್ದು, ಬಜೆಟ್ ಮಂಡನೆ ಆಗಲಿದೆ. ಹೀಗಾಗಿ ನಾನು ಈ ಕಾರ್ಯಕ್ರಮಕ್ಕೆ ನೇರವಾಗಿ ಭಾಗವಹಿಸಲು ಆಗಿಲ್ಲ" ಎಂದು ತಿಳಿಸಿದರು.
"ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಅವರ ನಂಬಿಕೆ ಉಳಿಸಿಕೊಂಡು ಕೆಲಸ ಮಾಡಬೇಕು. ನನಗೆ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಚೆಲುವರಾಯ ಸ್ವಾಮಿ ಅವರಿಗೆ ಕೃಷಿ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರು ನಗರವನ್ನು ಇಡೀ ವಿಶ್ವ ಗಮನಿಸುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರಿನ ಬಗ್ಗೆ ಮಾತನಾಡುತ್ತಾ, ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದರು. ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ. ಬೇರೆ ದೇಶಗಳು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿವೆ" ಎಂದು ಬಣ್ಣಿಸಿದರು.
"ಇಲ್ಲಿ ತಯಾರಾದ ವೈದ್ಯರು, ಇಂಜಿನಿಯರ್ಗಳು ವಿಶ್ವದ ಎಲ್ಲೆಡೆ ಸಾಧನೆ ಮಾಡುತ್ತಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ನಾವು ಒಟ್ಟಾಗಿ ಕೆಲಸ ಮಾಡಬೇಕು. ನೀವು ನಮ್ಮ ಮೇಲೆ ದೊಡ್ಡ ಮಟ್ಟದ ಪ್ರೀತಿ ಬಾಂಧವ್ಯ ಹೊಂದಿದ್ದೀರಿ. ಬೆಂಗಳೂರು ನಗರವನ್ನು ಗ್ಲೋಬಲ್ ಬೆಂಗಳೂರು ಆಗಿ ಪರಿವರ್ತಿಸಬೇಕಿದೆ. ಇದಕ್ಕಾಗಿ ನಾವು ಸಾರ್ವಜನಿಕರ ಸಲಹೆ ಕೇಳುತ್ತಿದ್ದು, ನೀವುಗಳು ಕೂಡ ನಿಮ್ಮ ಸಲಹೆಗಳನ್ನು ನೀಡಬೇಕು" ಎಂದು ಮನವಿ ಮಾಡಿದರು.