ಬೆಂಗಳೂರು: ಆರ್. ಅಶೋಕ್ ವಿರೋಧ ಪಕ್ಷ ನಾಯಕನಾಗಿ ಆಯ್ಕೆಯಾಗಿರುವುದು ನನಗೆ ಬಹಳ ಸಂತೋಷ ಆಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ನೋಡಿ ಅಶೋಕ್ ಅಣ್ಣ ಅವರು ಹಿರಿಯರಿದ್ದಾರೆ. ಏಳು ಬಾರಿ ಎಂಎಲ್ಎ ಆಗಿದ್ದಾರೆ. ಅವರಿಗೆ ದೊಡ್ಡ ಸ್ಥಾನ ಸಿಕ್ಕಿದೆ. ವಿರೋಧ ಪಕ್ಷದ ಸ್ಥಾನ ಅಂದ್ರೆ, ಸಂವಿಧಾನದಲ್ಲಿರೋ ಒಂದು ಸ್ಥಾನ. ಹೀಗಾಗಿ ನನಗೆ ಬಹಳ ಸಂತೋಷ ಆಗಿದೆ ಎಂದಿದ್ದಾರೆ.
ಅವರು ಹಿರಿಯರಿದ್ದಾರೆ ಪಕ್ಷದಲ್ಲಿ ನಿಷ್ಠೆಯಿಂದ ನಡೆದುಕೊಂಡು ಬಂದಿದ್ದಾರೆ. ಅವರಿಗೆ ಶುಭವಾಗಲಿ, ಉತ್ತಮವಾಗಿ ಜವಾಬ್ದಾರಿ ನಿಭಾಯಿಸಲಿ. ಅವರ ಅನುಭವದ ಜ್ಞಾನ ಭಂಡಾರದಿಂದ ಅನೇಕ ವಿಚಾರಗಳಲ್ಲಿ ಸರ್ಕಾರವನ್ನು ತಿದ್ದುವಂತಹ ಕೆಲಸ ಆಗಲಿ. ನನಗೆ ಬಹಳ ಸಂತೋಷ ಆಗಿದೆ. ಹಿರಿಯರನ್ನು ಕೊನೆಗೂ ಬಿಜೆಪಿ ಆಯ್ಕೆ ಮಾಡಿದ್ರಲಾ ಅಂತಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅದು ಅವರ ಪಾರ್ಟಿಯ ಆಂತರಿಕ ವಿಚಾರ. ಅದು ಮೊದಲಿನಿಂದಲೂ ಬಂದಿದೆ, ಹೊಸದೇನಲ್ಲ. ಅವರ ಪಾರ್ಟಿ ವಿಚಾರ ನಾನೇಕೆ ಮಾತನಾಡಲಿ. ಪಾರ್ಟಿ ಆ ರೀತಿ ನಡೆದುಕೊಂಡು ಬಂದಿದೆ. ಅದರ ಬಗ್ಗೆ ನಾನು ಮಾತನಾಡೋಕೆ ಹೋಗಲ್ಲ ಎಂದರು.
ಟೀಂ ಇಂಡಿಯಾಗೆ ಶುಭ ಹಾರೈಕೆ:ಭಾರತ ವಿಶ್ವಕಪ್ ಫೈನಲ್ ತಲುಪಿದ ವಿಚಾರವಾಗಿ ಪ್ರತಿಕ್ರಿಯಿಸಿ, ಇಡೀ ಭಾರತ ದೇಶದ ನಾಗರಿಕರು ವಿಶ್ವಕಪ್ ಫೈನಲ್ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಇಲ್ಲಿವರೆಗೂ ಸಹ ಬಹಳ ಉತ್ತಮವಾಗಿ ಸಾಧನೆ ಮಾಡಿದ್ದಾರೆ. ನಮ್ಮೆಲ್ಲರಿಗೂ ಗೌರವ ತಂದಿದ್ದಾರೆ. ಫೈನಲ್ ಕೂಡ ಗೆಲ್ಲುತ್ತೆ ಎಂಬ ವಿಶ್ವಾಸವಿದೆ. ಕರ್ನಾಟಕ ಸರ್ಕಾರದ ಪರವಾಗಿ ತುಂಬು ಹೃದಯದ ಶುಭಾಶಯ ಕೋರುತ್ತಿದ್ದೇನೆ. ನಮ್ಮ ತಂಡದವರು ಗೆದ್ದೇ ಗೆಲ್ಲುತ್ತಾರೆ. ಭಾರತಕ್ಕೆ ಗೌರವ ತರುತ್ತಾರೆ. ಇದು ನನ್ನ ನಂಬಿಕೆ ಹಾಗೂ ಇಡೀ ದೇಶದ ಜನರ ನಂಬಿಕೆ ಎಂದು ತಿಳಿಸಿದರು.
ಇದನ್ನೂ ಓದಿ:ಎರಡು ದಿನದಲ್ಲಿ ಕೋರ್ ಕಮಿಟಿ ರಚನೆ, ಅಧಿವೇಶನದಲ್ಲಿ ಚರ್ಚಿಸುವ ಕುರಿತು ಸಭೆ: ಆರ್. ಅಶೋಕ್