ಕರ್ನಾಟಕ

karnataka

ETV Bharat / state

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ: ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣದಲ್ಲಿ ಸಿಬಿಐ ವಾದವೇನು? - ಸಿಬಿಐ ವಾದ

ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ರದ್ದು ಕೋರಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಸಲ್ಲಿಸಿದ ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯುತ್ತಿದೆ. ಸಿಬಿಐ ಪರ ವಕೀಲರು ತಮ್ಮ ವಾದ ಮಂಡಿಸಿದ್ದಾರೆ.

DK Shivakumar Illegal assets case: CBI lawyers argument in High Court
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಡಿಕೆ ಶಿವಕುಮಾರ್ ವಿರುದ್ದದ ಪ್ರಕರಣದಲ್ಲಿ ಸಿಬಿಐ ವಾದವೇನು?

By

Published : Jul 12, 2023, 11:08 PM IST

ಬೆಂಗಳೂರು: ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ ಎಂಬುದನ್ನು ದೃಢವಾಗಿ ಉಲ್ಲೇಖಿಸುವ ಮೂಲಕ ಸಾಬೀತುಪಡಿಸುವಂತಿರಬೇಕು ಕೇಂದ್ರೀಯ ತನಿಖಾ ದಳ (ಸಿಬಿಐ)ದ ಪರ ವಕೀಲರು, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್‌ಗೆ ವಿವರಿಸಿದರು.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ರದ್ದು ಕೋರಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠದ ಮುಂದೆ ಸಿಬಿಐ ಪರ ವಕೀಲರು ವಾದ ಮಂಡಿಸಿದರು.

ದುರುದ್ದೇಶ ಪ್ರಕರಣ ಎಂಬುದು ಸಾಮಾನ್ಯ ಆರೋಪಕ್ಕೆ ಸೀಮಿತ ಆಗಬಾರದು. ಅದನ್ನು ದೃಢವಾಗಿ ಉಲ್ಲೇಖಿಸಿ, ಸಾಬೀತುಪಡಿಸಬೇಕು. ಯಾರ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಅವರ ಹೆಸರು ಉಲ್ಲೇಖಿಸಬೇಕು. ಅರ್ಜಿಯಲ್ಲಿ ಯಾರೊಬ್ಬರನ್ನೂ ಪಕ್ಷಕಾರರನ್ನಾಗಿ ಮಾಡಲಾಗಿಲ್ಲ. ಆದರೂ ರಾಜಕೀಯ ದುರುದ್ದೇಶ ಹೊಂದಲಾಗಿದೆ ಎಂಬ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಯಾರ ಸೂಚನೆಯ ಮೇರೆಗೆ ಎಂಬುದನ್ನು ತಿಳಿಸಬೇಕು ಎಂದು ವಕೀಲರು ವಾದಿಸಿದರು.

ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿ ಸಾರ್ವಜನಿಕ ವ್ಯಕ್ತಿ, ಕುಟುಂಬ ಸದಸ್ಯರು ಮಾತ್ರವಲ್ಲದೇ ಬೇರೆ ಯಾರೇ ಅವರಿಗೆ ಸಂಬಂಧಿಸಿದವರು ಆಗಿರಬಹುದು. ಇಲ್ಲಿ ಮೂರನೇ ವ್ಯಕ್ತಿಯೂ ಆಗಿರಬಹುದು ಎಂದು ಹೇಳಲಾಗಿದೆ. ಆರೋಪಿ ಮತ್ತು ಅವರ ಕುಟುಂಬ ಸದಸ್ಯರ ಕುರಿತು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ದುರುದ್ದೇಶ ಪೂರಿತವಾದ ಪ್ರಕರಣದ ಭಾಗವಾಗಿ ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಯನ್ನು ತನಿಖೆಯ ಸುಳಿಗೆ ಸಿಲುಕಿಸಿ ಅವರಿಗೆ ಮಾನಸಿಕ ಮತ್ತು ಭಾವನಾತ್ಮಕ ವೇದನೆ ಹಾಗೂ ಸಾಮಾಜಿಕ ವಿಡಂಬನೆ ಉಂಟು ಮಾಡುವಂತಹ ಪ್ರಕರಣಗಳಿರುತ್ತವೆ. ತನಿಖಾ ಪ್ರಕ್ರಿಯೆಯಲ್ಲಿ ಅದೆಲ್ಲವನ್ನೂ ಅನುಭವಿಸಬೇಕಾಗುತ್ತದೆ. ಕಾನೂನಿನ್ವಯ ಸಮಾಜ ನಡೆಯಬೇಕಾದರೆ ಇಂತಹ ಸಣ್ಣ ಪ್ರಮಾಣದ ದಂಡ ತೆರಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ಸಿಬಿಐ ಪರ ವಕೀಲರು ತಮ್ಮ ವಾದದಲ್ಲಿ ಉಲ್ಲೇಖಿಸಿದರು.

ಪ್ರಕರಣದ ಹಿನ್ನೆಲೆ...ಡಿಕೆ ಶಿವಕುಮಾರ್ ಸಂಬಂಧಿಸಿದ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಸಮಯದಲ್ಲಿ ಒಟ್ಟು 8.59 ಕೋಟಿ ರೂಪಾಯಿ ಮೊತ್ತವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ 2020ರ ಅಕ್ಟೋಬರ್ 3ರಂದು ಸಿಬಿಐ ಪ್ರಕರಣ ದಾಖಲಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಅಕ್ರಮ ಆಸ್ತಿ ಗಳಿಕೆ ಕೇಸ್​: ಪಂಜಾಬ್​ ಮಾಜಿ ಡಿಸಿಎಂ ಸೋನಿ ಬಂಧನ, ಒಂದು ದಿನ ಪೊಲೀಸ್​ ಕಸ್ಟಡಿಗೆ

ABOUT THE AUTHOR

...view details