ಕರ್ನಾಟಕ

karnataka

ETV Bharat / state

'ಅಣತಿಯ ಅಪ್ಪುಗೆ, ತೋರಿಕೆಯ ಒಗ್ಗಟ್ಟು, ಎಂತಹ ನಾಟಕವಯ್ಯಾ?': ಬಿಜೆಪಿ ಟೀಕೆ - ಡಿಕೆ ಶಿವಕುಮಾರ್​ಗೆ ಸನ್ನೆ ಮಾಡಿದ ರಾಹುಲ್​ ಗಾಂಧಿ

ದಾವಣಗೆರೆಯಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರನ್ನು ಡಿ.ಕೆ.ಶಿವಕುಮಾರ್ ಅಪ್ಪಿಕೊಂಡ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿ, ಇದೊಂದು ತೋರಿಕೆಯ ಆತ್ಮೀಯತೆ ಹಾಗೂ ಆಲಿಂಗನ ಎಂದು ಲೇವಡಿ ಮಾಡಿದ್ದಾರೆ.

dk-shivakumar-hugs-siddaramaiah-for-only-for-show-up
'ಆಲಿಂಗನ ತೋರಿಕೆ': ಸಿದ್ದರಾಮಯ್ಯರನ್ನು ತಬ್ಬಿಕೊಳ್ಳಲು ಡಿಕೆಶಿಗೆ ​ಸೂಚಿಸಿದ್ದ ರಾಹುಲ್​ ಗಾಂಧಿ!

By

Published : Aug 4, 2022, 5:27 PM IST

ಬೆಂಗಳೂರು: ದಾವಣಗೆರೆಯಲ್ಲಿ ಬುಧವಾರ ನಡೆದ ಅಮೃತ ಮಹೋತ್ಸವ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೋರಿಸಿದ್ದ ಅಪ್ಪುಗೆಯ ಆತ್ಮೀಯತೆ ತೋರಿಕೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ, ಇದು ಮತ್ತೊಂದು ರೀತಿಯ ಚರ್ಚೆ ಹಾಗೂ ವಿಶ್ಲೇಷಣೆಗೂ ಗ್ರಾಸವಾಗಿದೆ.

ಸಿದ್ದರಾಮಯ್ಯ ಅವರಿಗೆ ರಾಮನಗರದ ರೇಷ್ಮೆ ಶಾಲು ಹೊದಿಸಿ ಅಭಿನಂದಿಸಿ ಆತ್ಮೀಯ ಅಪ್ಪುಗೆಯ ಮೂಲಕ ವೇದಿಕೆ ಮೇಲೆ ಒಗ್ಗಟ್ಟು ಪ್ರದರ್ಶಿಸಿದ್ದ ಡಿ.ಕೆ.ಶಿವಕುಮಾರ್​ ಅವರ ನಡೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಪಾರ ಮೆಚ್ಚುಗೆಯೇನೋ ಗಳಿಸಿತು. ಆದರೆ, ಸಮಾರಂಭದ ವೇದಿಕೆಯ ಮೇಲಿದ್ದ ಪಕ್ಷದ ರಾಷ್ಟ್ರೀಯ ವರಿಷ್ಠ ರಾಹುಲ್ ಗಾಂಧಿ ಅವರು ನೀಡಿದ ಸೂಚನೆಯ ಮೇರೆಗೆ ಡಿಕೆಶಿ ತೋರಿಕೆಗಾಗಿ ಅಪ್ಪುಗೆಯ ಆತ್ಮೀಯತೆ ಪ್ರದರ್ಶಿಸಿದ್ದರು ಎಂಬುದಕ್ಕೆ ವಿಡಿಯೋ ತುಣುಕು ಸಾಕ್ಷಿಯಾಗಿದೆ.

ಇದನ್ನೂ ಓದಿ: ರಾಹುಲ್​ ಗಾಂಧಿ ಕೈಸನ್ನೆ ಸೂಚನೆ.. ಸಿದ್ದರಾಮಯ್ಯರನ್ನು ಅಪ್ಪಿಕೊಂಡ ಡಿಕೆಶಿ: ವಿಡಿಯೋ ನೋಡಿ

ಸಮಾರಂಭ ಆರಂಭವಾಗಿ 2 ಗಂಟೆಗಳ ಬಳಿಕ ಡಿ.ಕೆ.ಶಿವಕುಮಾರ್ ರಾಹುಲ್ ಗಾಂಧಿ ಜೊತೆ ವೇದಿಕೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ ಸಮಾರಂಭಕ್ಕೆ ರಾಹುಲ್ ಗಾಂಧಿಯನ್ನು ಕರೆತರುವಲ್ಲಿ ವಿಳಂಬ ಮಾಡಿದರು ಎಂಬ ಅಪಸ್ವರ ಸಹ ಕೇಳಿಬಂತು. ಆದರೆ, ವೇದಿಕೆ ಮೇಲೆ ಸಿದ್ದರಾಮಯ್ಯರನ್ನು ಡಿಕೆಶಿ ರೇಷ್ಮೆ ಶಾಲು ಹೊದಿಸಿ ಅಭಿನಂದಿಸಿ ತಬ್ಬಿಕೊಂಡಾಗ ಸಿದ್ದರಾಮಯ್ಯ ಅಭಿಮಾನಿಗಳು ಇನ್ಮುಂದೆ ಎಲ್ಲವೂ ಸರಿ ಹೋಗಲಿದೆ ಎಂಬ ವಿಶ್ವಾಸದಿಂದ ಚಪ್ಪಾಳೆಯ ಸುರಿಮಳೆ ಗರೆದಿದ್ದರು. ಆದರೆ, ಒಳಸೂಕ್ಷ್ಮ ಅರ್ಥವಾಗಲು ಒಂದು ದಿನ ತಡವಾಗಿದೆ.

ರಾಹುಲ್​ ಗಾಂಧಿ ಸನ್ನೆ:ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ ತಮ್ಮ ಆಸನದತ್ತ ತೆರಳಿ ಕುಳಿತುಕೊಳ್ಳಲು ಡಿ.ಕೆ.ಶಿವಕುಮಾರ್​ ಅ​ಣಿಯಾಗುತ್ತಿದ್ದರು. ಇದನ್ನು ಗಮನಿಸಿದ ರಾಹುಲ್, ಸಿದ್ದರಾಮಯ್ಯನವರನ್ನು ಅಪ್ಪಿಕೊಳ್ಳುವಂತೆ ಕೈ ಸನ್ನೆ ಮಾಡಿದ್ದಾರೆ. ಆಗ ಮತ್ತೆ ಒಂದು ಹೆಜ್ಜೆ ಮುಂದೆ ಬಂದಿರುವ ಡಿಕೆಶಿ ತಬ್ಬಿಕೊಂಡರು. ವೇದಿಕೆಯ ಮೇಲೆ ನಡೆ ಈ ಸೂಕ್ಷ್ಮ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

ಬಿಜೆಪಿಗೆ ಸಿಕ್ಕ ಹೊಸ ಅಸ್ತ್ರ:ಈ ಮೂಲಕ ರಾಹುಲ್​ ಗಾಂಧಿ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರನ್ನು ಡಿಕೆಶಿ ಅಪ್ಪಿಕೊಂಡು ಎಂಬುವುದು ವಿಡಿಯೋದಲ್ಲಿ ಅತ್ಯಂತ ಸ್ಪಷ್ಟವಾಗಿ ಗೋಚರಿಸಿದೆ. ಇಂತಹ ಅವಕಾಶಕ್ಕಾಗಿ ಕಾದಿದ್ದ ಬಿಜೆಪಿ ನಾಯಕರಿಗೆ ಹೊಸ ಅಸ್ತ್ರ ಸಿಕ್ಕಂತೆ ಆಗಿದ್ದು, ಇದೊಂದು ತೋರಿಕೆಯ ಆತ್ಮೀಯತೆ ಹಾಗೂ ಆಲಿಂಗನ ಎಂದು ಲೇವಡಿ ಮಾಡಿದ್ದಾರೆ. ಅಲ್ಲದೇ, 'ಅಣತಿಯ ಅಪ್ಪುಗೆ, ತೋರಿಕೆಯ ಒಗ್ಗಟ್ಟು, ಎಂತಹ ನಾಟಕವಯ್ಯ' ಎಂದು ಬಿಜೆಪಿ ಟ್ವೀಟ್​ ಮಾಡಿ, 'ಕಾಂಗ್ರೆಸ್ ಬೊಂಬೆಯಾಟ' ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ವ್ಯಂಗ್ಯ ಮಾಡಿದೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ರವಿಕುಮಾರ್, ಕಾಂಗ್ರೆಸ್ ಪಕ್ಷದಲ್ಲಿ ಯಾವೊಬ್ಬ ನಾಯಕರ ನಡುವೆಯೂ ಆತ್ಮೀಯತೆ ಇಲ್ಲ. ಮುಖ್ಯಮಂತ್ರಿ ತಾವೇ ಆಗಬೇಕೆಂಬ ಕನಸು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಅಷ್ಟೇ ಅಲ್ಲ, ಇನ್ನೂ ಏಳೆಂಟು ನಾಯಕರಲ್ಲಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಸಾಗಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಿಂದ ದೂರವಿರಲು ಇದು ಸಹ ಪ್ರಮುಖ ಕಾರಣವಾಗಲಿದೆ. ರಾಜ್ಯದ ಅಧಿಕಾರದ ಚುಕ್ಕಾಣಿಯನ್ನು ಇವರ ಕೈಯಲ್ಲಿಟ್ಟರೆ ಕಿತ್ತಾಡಿಕೊಂಡು ಅಧಿಕಾರ ನಡೆಸುತ್ತಾರೆ. ಉತ್ತಮ ಆಡಳಿತವನ್ನು ರಾಜ್ಯದಲ್ಲಿ ಇವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ನಿರ್ಧಾರವನ್ನು ಜನರೇ ಕೈಗೊಂಡು ಬಿಜೆಪಿಯನ್ನು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:'ನನ್ನ ಕೈ ಹಿಡಿದು ಕೈ ಎತ್ತಿರಲಿಲ್ಲವೇ?': ಸಿದ್ದರಾಮಯ್ಯ- ಡಿಕೆಶಿ ಒಗ್ಗಟ್ಟು ಪ್ರದರ್ಶನಕ್ಕೆ ಹೆಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ

ABOUT THE AUTHOR

...view details