ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜಕೀಯ ನಾಯಕತ್ವ ತರಬೇತಿ ಮತ್ತು ಆಡಳಿತ ನಿರ್ವಹಣಾ ಅಕಾಡೆಮಿಯ ಸಭೆ ಮಂಗಳವಾರ ಕ್ಯಾಪಿಟಲ್ ಹೋಟೆಲ್ನಲ್ಲಿ ನಡೆಯಿತು.
ಈ ಸಭೆಯಲ್ಲಿ ಸಮಿತಿ ಮುಖ್ಯಸ್ಥರಾದ ಸತೀಶ್ ಜಾರಕಿಹೊಳಿ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸಂಸದರಾದ ಡಿ.ಕೆ ಸುರೇಶ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರಾದ ಯು.ಟಿ ಖಾದರ್, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯರೆಡ್ಡಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಮುಖಂಡರಾದ ಎಲ್. ಹನುಮಂತಯ್ಯ, ವಿ.ಎಸ್.ಉಗ್ರಪ್ಪ, ಎಸ್. ಪ್ರಕಾಶ್ ಪಾಟೀಲ್, ಬಿ.ಎಲ್.ಶಂಕರ್ ಮತ್ತಿತರರು ಇದ್ದರು.
ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ರಾಜ್ಯದಲ್ಲಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ತಳಮಟ್ಟದ ಸಂಘಟನೆಗೆ ಮುಂದಾಗಿರುವ ಡಿಕೆಶಿ ಪಕ್ಷಕ್ಕೆ ಹೊಸ ಛಾಪು ನೀಡುವ ಸಿದ್ಧತೆ ನಡೆಸಿದ್ದಾರೆ. ಮಾಸ್ ಬೇಸ್ಡ್ ಪಕ್ಷವನ್ನು ಕೇಡರ್ ಬೇಸ್ಗೆ ಪರಿವರ್ತಿಸುವ ಕಾಯಕಕ್ಕೆ ಮುಂದಾಗಿದ್ದು, ಮುಂದಿನ ಮೂರು ವರ್ಷದಲ್ಲಿ ಪಕ್ಷಕ್ಕೆ ಹೊಸ ಆಯಾಮ ನೀಡಿ, ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ಈ ನಿಟ್ಟಿನಲ್ಲಿ ರಾಜಕೀಯ ನಾಯಕತ್ವ ತರಬೇತಿ ಮತ್ತು ಆಡಳಿತ ನಿರ್ವಹಣಾ ಅಕಾಡೆಮಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದು, ಇದರ ರೂಪುರೇಷೆ ಹೇಗಿರಬೇಕೆಂದು ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ತಮ್ಮ ಆಶಯ, ಅಭಿಲಾಶೆ ಹಾಗೂ ಪಕ್ಷ ಸಂಘಟನೆಗೆ ಕೈಗೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ಸೇರಿದ್ದ ನಾಯಕರಿಗೆ ಡಿಕೆಶಿ ವಿವರಿಸಿದರು.
ಅಲ್ಲದೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕಾರ್ಯರ್ತರಿಗೆ ಪಕ್ಷ ಸಂಘಟನೆಯ ಕುರಿತು ಮಾಹಿತಿ ನೀಡುವ, ಅವರನ್ನು ಸಂಘಟನೆಗೆ ಉತ್ತೇಜಿಸುವ ಹಾಗೂ ಪಕ್ಷವನ್ನು ಮುಂದೆ ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಸಂಕಲ್ಪ ತೊಡುವಂತೆ ಮಾಡುವ ನಿಟ್ಟಿನಲ್ಲಿ ಅಕಾಡೆಮಿ ಹೇಗೆ ಕಾರ್ಯ ನಿರ್ವಹಿಸಬೇಕೆಂಬ ಕುರಿತು ಮಾಹಿತಿ ನೀಡಿದರು. ಇದು ಪಾಲನೆಯಾಗುವಂತೆ ಮಾಡುವಲ್ಲಿ ಪಕ್ಷದ ಮೇಲ್ಪಂಕ್ತಿಯ ನಾಯಕರ ಪಾತ್ರ ಏನಿದೆ ಎಂಬ ವಿವರ ನೀಡಿದರು.