ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ ಗೆಲುವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಡಿಕೆ ಸೋದರರು, ಪ್ರಚಾರ ಹಾಗೂ ಕಾರ್ಯತಂತ್ರ ರೂಪಿಸುವ ಕಾರ್ಯದಲ್ಲಿ ಅವಿರತವಾಗಿ ನಿರತರಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಪರ ಬೆಳಗ್ಗಿನಿಂದ ಸಂಜೆಯವರೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚಾರ ನಡೆಸಿದರು. ಪ್ರತಿದಿನ ಸಂಜೆ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಗೆಲುವಿನ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 17 ಶಾಸಕರು ಒಬ್ಬರಾಗಿರುವ ಮುನಿರತ್ನ ನಾಯ್ಡು ಸೋಲು ಕಾಂಗ್ರೆಸ್ ನಾಯಕರಿಗೆ ಅನಿವಾರ್ಯವಾಗಿದೆ. ಇದಕ್ಕೆ ಅಗತ್ಯವಿರುವ ಎಲ್ಲ ಪ್ರಯತ್ನವನ್ನು ಅವರು ಮಾಡಿಕೊಂಡು ಸಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಪಾಲಿಕೆ ಸದಸ್ಯರಾಗಿ ಹಾಗೂ ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಮುನಿರತ್ನ ರಾಜೀನಾಮೆ ನೀಡಿ ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದಾರೆ. ಇವರನ್ನು ಸೋಲಿಸುವ ಪಣತೊಟ್ಟಿರುವ ಡಿಕೆ ಸೋದರರು ಈ ನಿಟ್ಟಿನಲ್ಲಿ ಅವಿರತ ಶ್ರಮಪಡುತ್ತಿದ್ದಾರೆ.
ಡಿಕೆ ಸುರೇಶ್ ಪಾಲಿಗೆ ಇದು ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. ಇನ್ನು ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಉಪಚುನಾವಣೆ ಇದಾಗಿದೆ. ಇಲ್ಲಿ ಗೆಲ್ಲುವ ಮೂಲಕ ತಮ್ಮ ಅಧ್ಯಕ್ಷಗಿರಿಯ ಉತ್ತಮ ಆರಂಭ ಪಡೆಯುವುದು ಉದ್ದೇಶವಾಗಿದೆ. ಅಲ್ಲದೇ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೊತೆಗೆ ತಮ್ಮ ವೈಯಕ್ತಿಕ ವರ್ಚಸ್ಸನ್ನು ಪಣಕ್ಕಿಟ್ಟು ಡಿಕೆ ಸೋದರರು ಅಭ್ಯರ್ಥಿ ಕುಸುಮ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.