ಬೆಂಗಳೂರು: ಪದ್ಮನಾಭನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ವಿರುದ್ಧ ಕಾಂಗ್ರೆಸ್ನಿಂದ ಸಂಸದ ಡಿ.ಕೆ ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗೆ ತೆರೆ ಬಿದ್ದಿದೆ. ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಪದ್ಮನಾಭನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ. ರಘುನಾಥ್ ನಾಯ್ಡು ಆಯ್ಕೆಯಾಗಿದ್ದರು. ಗುರುವಾರ(ನಿನ್ನೆ) ನಾಮಪತ್ರ ಸಲ್ಲಿಕೆ ಆರಂಭವಾಗಿರುವ ಹಿನ್ನೆಲೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಲು ಆರಂಭಿಸಿದ್ದಾರೆ.
ಮೊದಲ ದಿನವೇ ಬಿ ಫಾರಂ ಸ್ವೀಕರಿಸಲು ಆಗಮಿಸಿದ್ದ ರಘುನಾಥ್ ನಾಯ್ಡು ಅವರನ್ನ ಕಾರಣ ನೀಡದೇ ವಾಪಸ್ ಕಳುಹಿಸಲಾಗಿತ್ತು. ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಆರ್. ಅಶೋಕ್ ಅವರನ್ನು ಬಿಜೆಪಿ ಕಣಕ್ಕಿಳಿಸಿರುವ ಹಿನ್ನೆಲೆ ಪದ್ಮನಾಭ ನಗರದಲ್ಲಿ ಅಶೋಕ್ ವಿರುದ್ಧ ಡಿ.ಕೆ ಸುರೇಶ್ ಕಣಕ್ಕಿಳಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ತಮ್ಮ ಕ್ಷೇತ್ರವಾದ ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಜತೆಗೆ ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ಅವರನ್ನ ಬಿಜೆಪಿ ಕಣಕ್ಕಿಳಿಸಿದೆ. ಎರಡು ಕ್ಷೇತ್ರದಿಂದ ಪ್ರತಿನಿಧಿಸುತ್ತಿರುವ ಅಶೋಕ್ ಕನಕಪುರದಲ್ಲಿ ಎಷ್ಟು ಪ್ರಮಾಣದ ಒಕ್ಕಲಿಗ ಮತದಾರರನ್ನ ಸೆಳೆಯುತ್ತಾರೆ ಎಂಬುದನ್ನು ಪರೀಕ್ಷಿಸಲು ಬಿಜೆಪಿ ಹೈಕಮಾಂಡ್ ಒಂದು ಮಹತ್ವದ ನಡೆ ಇಟ್ಟಿದೆ.
ಇದೀಗ ಡಿ.ಕೆ ಶಿವಕುಮಾರ್ ವಿರುದ್ಧ ಕಣಕ್ಕಿಳಿದಿರುವ ಅಶೋಕ್ ಬಗ್ಗೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕರು ಡಿ.ಕೆ ಸುರೇಶ್ ಅವರು ಅಶೋಕ್ ವಿರುದ್ಧ ಪದ್ಮನಾಭ ನಗರದಲ್ಲಿ ಕಣಕ್ಕಿಳಿಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಶೋಕ್ ಯಾವ ಕ್ಷೇತ್ರದಲ್ಲಿಯೂ ಗೆಲ್ಲದಂತೆ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗುತ್ತಿತ್ತು. ಇದರಿಂದಲೇ ರಘುನಾಥ್ ನಾಯ್ಡುಗೆ ಬಿ ಫಾರಂ ವಿತರಣೆ ಮಾಡಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಆಗಿತ್ತು.
ಆದರೆ, ಕಾಂಗ್ರೆಸ್ ಕಚೇರಿಗೆ ಆಗಮಿಸಿ ವಾಪಸ್ ಆಗುವ ಸಂದರ್ಭ ಸ್ವತಃ ರಘುನಾಥ್ ನಾಯ್ಡು ಮಾತನಾಡಿ ಈ ದಿನ ಚೆನ್ನಾಗಿಲ್ಲ. ಇದರಿಂದಾಗಿ ನಾಳೆ ಬಿ ಫಾರಂ ಸ್ವೀಕರಿಸುತ್ತೇನೆ. ಒಂದೊಮ್ಮೆ ಡಿ.ಕೆ ಸುರೇಶ್ ಪದ್ಮನಾಭನಗರದಿಂದ ಕಣಕ್ಕಿಳಿಯಲು ಬಯಸಿದರೆ ತಾವು ಅವರಿಗಾಗಿ ಕ್ಷೇತ್ರ ಬಿಟ್ಟು ಕೊಡುವುದಾಗಿ ತಿಳಿಸಿದ್ದರು.