ಬೆಂಗಳೂರು :ಸಾಮಾನ್ಯವಾಗಿ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಮೂರು ತಿಂಗಳು ನಡೆಸಲಾಗುತ್ತದೆ. ಆದರೆ, ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಏಳು ತಿಂಗಳು ನಡೆಸಿದ್ದು, ಸಿಬಿಐ ಕೈಪಿಡಿ ಪಾಲಿಸಿಲ್ಲ. ಇಷ್ಟು ಸುದೀರ್ಘ ಅವಧಿ ಏಕೆ ಎನ್ನುವುದು ಗೊತ್ತಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ಮತ್ತು ತನಿಖೆ ರದ್ದುಪಡಿಸುವಂತೆ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರಕರಣದಲ್ಲಿ ಆರೋಪಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ರಾಜಕೀಯ ದುರುದ್ದೇಶ ಎಂದು ಹೇಳುವ ಬದಲಾಗಿ ಯಾರು ಅದನ್ನು ಮಾಡುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿ, ಅವರನ್ನು ತಮ್ಮ ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಬೇಕಿತ್ತು ಎಂಬ ಕೇಂದ್ರೀಯ ತನಿಖಾ ದಳದ (ಸಿಬಿಐ) ವಾದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ ಪರ ವಕೀಲರು, "ರಾಜಕೀಯ ಎದುರಾಳಿಗಳನ್ನು ಹಲವು ರೀತಿಯ ದಾವೆಯಲ್ಲಿ ಸಿಲುಕಿಸುವುದು ರಾಜಕೀಯ ದುರುದ್ದೇಶವೇ ಆಗಿರಲಿದೆ. ಹೀಗಾಗಿ, ಇಲ್ಲಿ ಯಾರನ್ನೂ ಪ್ರತಿವಾದಿ ಮಾಡುವ ಅಗತ್ಯವಿಲ್ಲ. ನಮ್ಮ ಕಕ್ಷಿದಾರರ ಬಳಿ ಅಕ್ರಮ ಹಣ ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ವಿಚಾರಣೆ, ಈಗ ಸಿಬಿಐಯಿಂದ ತನಿಖೆ ನಡೆಸಲಾಗುತ್ತಿದೆ. ಈ ಅರ್ಥದಲ್ಲಿ ರಾಜಕೀಯ ದುರುದ್ದೇಶ" ಎಂದು ಕರೆದಿರುವುದಾಗಿ ವಿವರಿಸಿದರು.
ಇದನ್ನೂ ಓದಿ :ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಹಲವು ವರ್ಷಗಳ ಬಳಿಕ ದೋಷಾರೋಪ ಪಟ್ಟಿ ಸಲ್ಲಿಕೆ: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್