ಬೆಂಗಳೂರು:ಉತ್ತರಪ್ರದೇಶದಲ್ಲಿ ಜನ ನಿರ್ಭೀತಿಯಿಂದ ಓಡಾಡುವ ಪರಿಸ್ಥಿತಿಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
2022ರಲ್ಲಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಪ್ರಿಯಾಂಕಾ ಗಾಂಧಿ ಉಸ್ತುವಾರಿಯಾಗಿ ನಿಯೋಜನೆಗೊಂಡಿದ್ದಾರೆ. ಗಾಂಧಿ ಕುಟುಂಬ ಈಗಲೂ ದೇಶದಲ್ಲಿ ತನ್ನ ಹಿಂದಿನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ ಎಂಬುದನ್ನು ತೋರಿಸಿಕೊಳ್ಳುವ ಅನಿವಾರ್ಯತೆ ಎದುರಿಸುತ್ತಿದೆ. ಅಲ್ಲದೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಉತ್ತರಪ್ರದೇಶದಲ್ಲಿ ಗೆಲ್ಲಿಸಿಕೊಟ್ಟರೆ ಪ್ರಿಯಾಂಕಾ ಗಾಂಧಿ ಇಮೇಜ್ ಕೂಡ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ದೇಶದ ಬಹುತೇಕ ಎಲ್ಲಾ ಕಾಂಗ್ರೆಸ್ ನಾಯಕರು ಸದ್ಯ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಜನಸ್ನೇಹಿ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ನಿರಂತರವಾಗಿ ಆರೋಪಿಸುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರವಲ್ಲಿದೆ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು ಹಾಗೂ ಮಾಜಿ ಸಚಿವರುಗಳು ಸಹ ಉತ್ತರ ಪ್ರದೇಶ ರಾಜ್ಯ ರಾಜಕಾರಣದ ಕುರಿತು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ.
ಇದೀಗ ಟ್ವೀಟ್ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಮಹಿಳೆಯರು ಸಂಜೆ 5ರ ನಂತರ ಪೊಲೀಸ್ ಠಾಣೆಗೆ ಹೋಗಬಾರದು ಎಂದು ಉತ್ತರ ಪ್ರದೇಶದ ಬಿಜೆಪಿ ಮಹಿಳಾ ನಾಯಕಿಯೊಬ್ಬರು ಪುಕ್ಕಟೆ ಸಲಹೆ ನೀಡಿದ್ದಾರೆ. ಯುಪಿಯಲ್ಲಿ ಮಹಿಳಾ ಸುರಕ್ಷತೆಗೆ ಕಂಟಕ ಇದೆ ಎಂಬುದನ್ನು ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದು ಯುಪಿ ಮಾದರಿ, ಇಂಥ ಜಂಗಲ್ ರಾಜ್ ವ್ಯವಸ್ಥೆಯನ್ನು ಕರ್ನಾಟಕದಲ್ಲೂ ಜಾರಿಗೆ ತರಲು ಹೊರಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗ ಕಳೆದುಕೊಂಡವರಿಗೆ, ನೊಂದ ಜನರಿಗೆ ಸಹಾಯ ಮಾಡಿ ಸಂಭ್ರಮಿಸಿ: ಬಿಜೆಪಿಗೆ ಡಿಕೆಶಿ ಟಾಂಗ್