ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಸಂಭ್ರಮದಲ್ಲಿರುವ ಬಿಜೆಪಿ ಇದು ಮುಂದಿನ ಚುನಾವಣೆ ದಿಕ್ಸೂಚಿ ಎಂದು ವಿಶ್ಲೇಷಿಸುತ್ತಿದೆ. ಅವರಿಗೆ 'ಗೆಲ್ಲುವ ವಿಶ್ವಾಸ ಇರುವುದು ನಿಜವೇ ಆದರೆ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಜೆಪಿ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
ಚುನಾವಣೆ ಮುಂದೂಡುತ್ತಿರುವುದು ಯಾಕೆ? :ನಗರದ ಬ್ಯಾಟರಾಯನಪುರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ನಾವು ಬಿಜೆಪಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದೆವು. ಈ ಬಾರಿಯೂ ನಾವು ಅವರಿಗಿಂತ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ.
ಬಿಜೆಪಿಯವರಿಗೆ ಗೆಲ್ಲುವ ಧೈರ್ಯ, ಆತ್ಮವಿಶ್ವಾಸ ಇದ್ದರೆ ಬಿಬಿಎಂಪಿ ಚುನಾವಣೆ ನಡೆಸಲಿ. ಕುಂಟುನೆಪ ಹೇಳುತ್ತಾ ಚುನಾವಣೆ ಮುಂದೂಡುತ್ತಿರುವುದು ಯಾಕೆ? ಚುನಾವಣೆ ಮಾಡಿ, ನಾವು ಸಿದ್ಧವಾಗಿದ್ದೇವೆ. ಜನರ ಕೈಗೆ ಅಧಿಕಾರ ಸಿಗಬೇಕು ಎಂಬುದೇ ಕಾಂಗ್ರೆಸ್‌ನ ಸಿದ್ಧಾಂತ ಎಂದ್ರು.
ಬಿಜೆಪಿ ಸರ್ಕಾರಕ್ಕೆ ಡಿ ಕೆ ಶಿವಕುಮಾರ್ ಸವಾಲು ಹಾಕಿರುವುದು.. ಹೆಚ್ಚುಕಮ್ಮಿ ಸರಿಸಮಾನ ಸ್ಥಾನದಲ್ಲಿದ್ದೇವೆ :ಪಾಲಿಕೆಗಳ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸಂಭ್ರಮಿಸುತ್ತಿದೆ. ಯಾವ ಕಾರಣಕ್ಕೆ ಈ ಸಂಭ್ರಮ? ನಮಗೆ ಈ ಫಲಿತಾಂಶ ಸಮಾಧಾನ ತಂದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಅವರು 39 ಗೆದ್ದರೆ, ನಾವು 36 ಸ್ಥಾನ ಗೆದ್ದಿದ್ದೇವೆ. ನಮ್ಮ ಪಕ್ಷದ ಐವರು ಬಂಡಾಯ ಅಭ್ಯರ್ಥಿಗಳು ಗೆದ್ದಿದ್ದು, ಹೆಚ್ಚುಕಮ್ಮಿ ಸರಿಸಮಾನ ಸ್ಥಾನದಲ್ಲಿದ್ದೇವೆ. ಬೆಳಗಾವಿಯಲ್ಲಿ ಹಿಂದೆ ನಾವು ಪಕ್ಷದಿಂದ ಅಭ್ಯರ್ಥಿಯನ್ನೇ ನಿಲ್ಲಿಸುತ್ತಿರಲಿಲ್ಲ. ಈ ಬಾರಿ ನಿಲ್ಲಿಸಿದ್ದೇವೆ. ಎಂಇಎಸ್‌ನವರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಸಹಾಯ ಮಾಡಿದ್ದಾರೆ. ನಾವು 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೂ ಉತ್ತಮ ಆರಂಭ ಮಾಡಿದ್ದೇವೆ ಎಂದ್ರು.
ಕಳೆದ ಬಾರಿಗಿಂತ ನಾಲ್ಕು ಸ್ಥಾನ ಹೆಚ್ಚು ಗೆದ್ದಿದ್ದೇವೆ :ಕಲಬುರ್ಗಿಯಲ್ಲಿ ಕಳೆದ ಬಾರಿಗಿಂತ ನಾಲ್ಕು ಸ್ಥಾನ ಹೆಚ್ಚು ಗೆದ್ದಿದ್ದೇವೆ. ಯಾರೂ ಕೂಡ ಧೃತಿಗೆಡುವ ಅಗತ್ಯವಿಲ್ಲ. ತರೀಕೆರೆ ಹಾಗೂ ಇತರೆ ಕಡೆಗಳಲ್ಲಿ ಅವರದೇ ಶಾಸಕರಿದ್ದರು. 3 ತಿಂಗಳ ಹಿಂದೆ 10 ಕಡೆಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ 7, ಜೆಡಿಎಸ್ 2 ಹಾಗೂ ಬಿಜೆಪಿ 1 ಸ್ಥಾನ ಮಾತ್ರ ಗೆದ್ದಿತ್ತು. ಹಾಗಾದರೆ, ಇದೂ ಮುಂದಿನ ಚುನಾವಣೆ ದಿಕ್ಸೂಚಿನಾ? ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ 3.5 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದ, ನಾವು ಕೇವಲ 5000 ಮತಗಳಿಂದ ಸೋತು ಅಂತರ ಕಡಿಮೆ ಮಾಡಿದ್ದೇವೆ. ಇದನ್ನು ದಿಕ್ಸೂಚಿ ಎಂದು ಹೇಳುತ್ತೇವಾ? ಎಂದರು.
ಇರೋದು ಒಂದೇ ಬಣ :ಪ್ರಜಾಪ್ರಭುತ್ವದಲ್ಲಿ ನಾವು ಸೋಲು ಹಾಗೂ ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುತ್ತೇವೆ. ಜನ ಚುನಾವಣೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಆಡಳಿತ ತೆಗೆದು ಹಾಕಿ, ಮುಂದೆ ಕಾಂಗ್ರೆಸ್ ಸರ್ಕಾರ ತರಲು ಸಂಕಲ್ಪ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾವ ಬಣವೂ ಇಲ್ಲ. ಇರೋದು ಒಂದೇ ಬಣ, ಅದು ಕಾಂಗ್ರೆಸ್ ಬಣ ಎಂದ್ರು.
ನಿಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ :ಬಿಜೆಪಿಯಲ್ಲಿರುವ ಬಣ, ಇತಿಹಾಸ ನೋಡಿ. ನಿಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ. ನಮ್ಮ ಬಗ್ಗೆ ಮಾತನಾಡುವ ಸಂದರ್ಭ ಬಂದಿಲ್ಲ. ಬಿಜೆಪಿಯವರು ಕೇವಲ ಹಿಂದೂಗಳು ಮುಂದು ಎಂದರೆ, ಕಾಂಗ್ರೆಸ್ ಪಕ್ಷವು ಹಿಂದೂ, ಸಿಖ್, ಮುಸಲ್ಮಾನರು, ಕ್ರೈಸ್ತರು ಎಲ್ಲರೂ ಒಂದು ಎನ್ನುತ್ತದೆ. ಬಿಜೆಪಿಯವರು ಸರ್ಕಾರದ ಆಹಾರ ಕಿಟ್ಗಳಿಗೆ ತಮ್ಮ ಫೋಟೋ ಹಾಕಿಕೊಂಡು ಹಂಚಿದಾಗ ನಾಚಿಕೆ ಆಗಲಿಲ್ಲವಾ? ಅವರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಿಸಲು ಆಗಲಿಲ್ಲ. ಆದರೆ, ನಮ್ಮ ನಾಯಕರು, ಕಾರ್ಯಕರ್ತರು ತಮ್ಮ ಸ್ವಂತ ಸಂಪಾದನೆಯ ಹಣದಲ್ಲಿ ಬಡವರಿಗೆ ಆಹಾರ ಕಿಟ್ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಹೃದಯ ಶ್ರೀಮಂತಿಕೆಗೆ ಸಾಕ್ಷಿ ಎಂದರು.
'ಕಾಂಗ್ರೆಸ್ ನಡಿಗೆ, ಜನರ ಕಡೆಗೆ' ಕಾರ್ಯಕ್ರಮ:ಅಕ್ಟೋಬರ್ ತಿಂಗಳಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಕಾರ್ಯಕರ್ತರ ಸಭೆ ಅಥವಾ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು. ನೀವು ಕಾರ್ಯಕ್ರಮ ಏರ್ಪಡಿಸಿ, ನಾನು ಸಿದ್ದರಾಮಯ್ಯ ಅವರು ಬರುತ್ತೇವೆ. ಮಹಾತ್ಮ ಗಾಂಧೀಜಿ ಅವರು ಹುಟ್ಟುಹಬ್ಬದ ಪ್ರಯುಕ್ತ ನಾವು ಇಡೀ ರಾಜ್ಯದಲ್ಲಿ ಗಾಂಧೀಜಿ ಅವರ ಹೆಸರಲ್ಲಿ "ಕಾಂಗ್ರೆಸ್ ನಡಿಗೆ, ಜನರ ಕಡೆಗೆ" ಕಾರ್ಯಕ್ರಮ ಮಾಡಲಿದ್ದೇವೆ ಎಂದ್ರು.
ಸರ್ಕಾರಕ್ಕೆ ಹೃದಯ, ಮಾನವೀಯತೆ ಇಲ್ಲ :ಬೀದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರಿಗೆ ಒಂದು ರೂಪಾಯಿ ಸಿಗದೇ ಜನ ನರಳುತ್ತಿದ್ದಾರೆ. ಉದ್ಯೋಗ ಕೊಟ್ಟವನು, ಉದ್ಯೋಗ ಪಡೆದವನು, ರೈತ, ಕಾರ್ಮಿಕ ಎಲ್ಲರೂ ಪರದಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಯಾರು? ಈಗ ನಾನು ಕಾರ್ಯಕ್ರಮಕ್ಕೆ ಬರುತ್ತಿರುವಾಗ ಸವಿತಾ ಸಮಾಜದವರು ಬಂದು ನಮ್ಮ ಅಳಲು ಕೇಳಬೇಕು ಎಂದು ಮನವಿ ಮಾಡಿದರು. ಅವರಿಗೆ ಸರ್ಕಾರ 5 ಸಾವಿರ ರು. ಪರಿಹಾರ ಕೊಡಲು ಆಗಲಿಲ್ಲ. ಅವರು ಕೊಡೋ ₹5 ಸಾವಿರದಿಂದ ಅವರ ಕಷ್ಟ ತೀರುವುದಿಲ್ಲ. ಆದರೆ, ಅವರ ಜತೆ ಇದ್ದೇವೆ ಎಂದು ಹೇಳಲೂ ಸರ್ಕಾರಕ್ಕೆ ಹೃದಯ, ಮಾನವೀಯತೆ ಇಲ್ಲ ಎಂದು ಕಿಡಿಕಾರಿದ್ರು.
ಕರ್ನಾಟಕದ್ದು ದೇಶದಲ್ಲೇ ಅತಿ ಭ್ರಷ್ಟ ಸರ್ಕಾರ :ಬಿಜೆಪಿ ಸರ್ಕಾರ ಹೇಳಿದಂತೆಲ್ಲಾ ನಾವು ಕೇಳಿದ್ದೇವೆ. ಪ್ರಧಾನಿ ಮೋದಿ ಅವರು 18 ದಿನಗಳಲ್ಲಿ ಮಹಾಭಾರತ ಯುದ್ಧ ಮುಗಿದಿತ್ತು. 21 ದಿನಗಳಲ್ಲಿ ಕೊರೊನಾ ವಿರುದ್ಧದ ಯುದ್ಧ ಗೆಲ್ಲುತ್ತೇವೆ ಎಂದು ಹೇಳಿದ್ದರು. ಕೋವಿಡ್ ಸಂದರ್ಭದಲ್ಲಿ ವ್ಯಾಪಾರ, ವಹಿವಾಟು ಬಂದ್ ಮಾಡಿದರು. ಬೆಡ್ ದಂಧೆ ಬಗ್ಗೆ ಅವರ ಸಂಸದರೇ ಹೇಳಿದರು. ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಆಡಳಿತದ ಸರ್ಕಾರ ಎಲ್ಲಿದೆ ಎಂದರೆ, ಅದು ಕರ್ನಾಟಕದಲ್ಲಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರು ಅಧಿಕಾರಕ್ಕೆ ಬಂದಂತೆ :ಈ ಸರ್ಕಾರಕ್ಕೆ ಹೃದಯ, ಕಣ್ಣು, ಕಿವಿ, ಏನೂ ಇಲ್ಲ. ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಕಬ್ಬಿಣ 60 ಸಾವಿರ, ಸೀಮೆಂಟ್ ಚೀಲ 400, ಪೆಟ್ರೋಲ್ 106, ಗ್ಯಾಸ್ 900 ರೂ. ಗಡಿ ಮುಟ್ಟಿದೆ. ಇಲ್ಲಿರುವ ಮಹಿಳೆಯರ ಕೂಲಿ ಹೆಚ್ಚಾಗಿದೆಯಾ? ಇಲ್ಲ. ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ 350 ರೂಪಾಯಿಗೆ ಗ್ಯಾಸ್ ನೀಡಲಾಗುತ್ತಿತ್ತು.
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೊದಲ ದಿನವೇ ಬಡವರಿಗೆ ಉಚಿತ ಅಕ್ಕಿ ನೀಡಿದರು. ಇಂತಹ ಒಂದು ಕಾರ್ಯಕ್ರಮವನ್ನು ಬಿಜೆಪಿಯವರು ತೋರಿಸಲಿ, ನೋಡೋಣ. ಭವಿಷ್ಯದಲ್ಲಿ ಯಾವುದೇ ಚುನಾವಣೆ ನಡೆಯಲಿ, ನಿಮಗೆ ಶಕ್ತಿ ತುಂಬುವುದೇ ಈ ಹಸ್ತ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರು ಅಧಿಕಾರಕ್ಕೆ ಬಂದಂತೆ ಎನ್ನುವ ಹಾಗೆ ನಾವು ಕಾರ್ಯಕ್ರಮ ನೀಡುತ್ತೇವೆ. ಬಿಜೆಪಿಯವರು ಇಂತಹ ಯಾವುದಾದರೂ ಒಂದು ಯೋಜನೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನಿಂದ ಆಹಾರ ಕಿಟ್ ವಿತರಣೆ ಕೃಷ್ಣಬೈರೇಗೌಡ ಅವರು ಕೇವಲ ಬ್ಯಾಟರಾಯನಪುರ ಕ್ಷೇತ್ರಕ್ಕೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಶಕ್ತಿ. ರಾಜ್ಯದ ಯಾವುದೇ ಭಾಗಕ್ಕೆ ಕಳುಹಿಸಿದರೂ ಅಲ್ಲಿ ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯ ಅವರಿಗಿದೆ. ಪಕ್ಷದ ಅಧ್ಯಕ್ಷನಾದ ನಂತರ ಮೊದಲ ಬಾರಿಗೆ ಪಕ್ಷದ ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ. ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಅವರು ಕಳೆದ ಮೂರು ತಿಂಗಳಿಂದ ಆಕ್ಸಿಜನ್ ಇಲ್ಲದವರಿಗೆ ಆಕ್ಸಿಜನ್ ಕೊಟ್ಟಿದ್ದಾರೆ. ನಿಮ್ಮ ಸೇವೆ ಮಾಡಿದ್ದಾರೆ. ಕೃಷ್ಣಪ್ಪನವರು ಕೋವಿಡ್ನಿಂದ ಸತ್ತವರ ಕುಟುಂಬಗಳಿಗೆ 25 ಸಾವಿರ ರೂ. ನೆರವು ನೀಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ನಾನು ಅಭಿನಂದಿಸುತ್ತೇನೆ ಎಂದು ವಿವರಿಸಿದರು.