ಬೆಂಗಳೂರು : ನಾನು ಹಳ್ಳಿಯಿಂದ ಬಂದಿರುವವನು, ನನಗೆ ಅವರಷ್ಟು ದೊಡ್ಡ ಅನುಭವವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ಕೊಟ್ಟರು. ಕೆ.ಕೆ.ಗೆಸ್ಟ್ ಹೌಸ್ನಲ್ಲಿಂದು ಕುಮಾರಸ್ವಾಮಿ 26 ಅಂಶಗಳ ಬಗ್ಗೆ ಟೀಕೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಅನುಭವ ಸಣ್ಣದು. ಅದರ ಆಧಾರದ ಮೇಲೆ ನಾನು ಮಾಹಿತಿ ಕೇಳಿದ್ದೇನೆ ಎಂದರು.
ಬಿಬಿಎಂಪಿ ಕಾಮಗಾರಿಗಳ ಅಕ್ರಮ ತನಿಖೆಗೆ ಎಸ್ಐಟಿ ರಚಿಸಿರುವ ಬಗ್ಗೆ ಕೇಳಿದಾಗ, ನಾನು ಯಾವುದೇ ಎಸ್ಐಟಿ ರಚನೆ ಮಾಡಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವಾಗ ಯಾವ ಕಾಮಗಾರಿಗೆ ಟೆಂಡರ್ ಆಯಿತು, ಕಾಮಗಾರಿಗೆ ಯಾವಾಗ ಅನುಮತಿ ಸಿಕ್ಕಿತು, ಯಾವಾಗ ಕಾಮಗಾರಿ ಮುಗಿಯಿತು, ಯಾವಾಗ ಬಿಲ್ ಪಾಸ್ ಆಗಿದೆ, ಕಾಮಗಾರಿ ಗುಣಮಟ್ಟ ಹೇಗಿದೆ ಎಂದು ಪರಿಶೀಲನೆ ಮಾಡಬೇಕಿದೆ. 2 ಕೋಟಿ ವೆಚ್ಚದ ಕಾಮಗಾರಿಯಲ್ಲಿ 1.99 ಕೋಟಿ ಬಿಲ್ ನೀಡಿದ್ದು, ಕೇವಲ 1 ಲಕ್ಷ ಮಾತ್ರ ಬಾಕಿ ಉಳಿಸಿದ್ದಾರೆ. ಇಂತಹ ಸುಮಾರು 25 ಪ್ರಕರಣಗಳಿವೆ. ಈ ಬಗ್ಗೆ ನಾನು ಮಾಹಿತಿ ಪಡೆಯಬೇಕಿದೆ ಎಂದರು.
ಅಧಿಕಾರಿಗಳು ಈವರೆಗೂ ಎಷ್ಟು ಕಾಮಗಾರಿಗಳ ಮಾಹಿತಿ ನೀಡಿದ್ದಾರೆ ಎಂಬ ಪ್ರಶ್ನೆಗೆ, ಅಧಿಕಾರಿಗಳು ಇನ್ನೂ ಮಾಹಿತಿ ನೀಡಿಲ್ಲ. ನಾನು ಕೆಲವು ಮಾನದಂಡಗಳನ್ನು ಹಾಕಿದ್ದು, ಅದರ ಮೇಲೆ ಅಧ್ಯಯನ ಮಾಡಿ ವರದಿ ನೀಡಲಿದ್ದಾರೆ. ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿರುವ ಗುತ್ತಿಗೆದಾರರ ಬಿಲ್ ಪಾವತಿ ಆಗಲಿದೆ ಎಂದು ಹೇಳಿದರು.
ಈ ಹಿಂದೆ ನಾವು 40 % ಕಮಿಷನ್, ಪೇಸಿಎಂ ಅಭಿಯಾನ ಮಾಡಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕೂಡ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದರು. ಲೋಕಾಯುಕ್ತ ಸಂಸ್ಥೆ ಕೂಡ ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 137 ಕೋಟಿ ಹಣ ಕಾಮಗಾರಿ ಆಗದೇ ಬಿಲ್ ಪಾವತಿ ಮಾಡಲಾಗಿದೆ ಎಂದು ವರದಿ ನೀಡಿದೆ. ನಾವು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸದನದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಅವರ ಸಲಹೆ, ಮಾರ್ಗದರ್ಶನದಂತೆ ನಾವು ಕ್ರಮ ಕೈಗೊಂಡು ತನಿಖೆ ಮಾಡುತ್ತಿದ್ದೇವೆ. ಯಾರು ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿದ್ದಾರೋ ಅವರಿಗೆ ಬಿಲ್ ಪಾವತಿ ಆಗಲಿದೆ. ಈ ಕಾಮಗಾರಿಗಳು ವ್ಯವಸ್ಥಿತ ರೂಪದಲ್ಲಿ ನಡೆಯಬೇಕು. ರಸ್ತೆ ನಿರ್ಮಾಣವಾಗದೇ ಬಿಲ್ ಪಾವತಿಸಲು ಮುಂದಾಗಿದ್ದರು. ಸಂತೋಷ್ ಪಾಟೀಲ್ ಪ್ರಕರಣದಂತೆ ಅನೇಕ ಪ್ರಕರಣಗಳು ಇವೆ. ನಮ್ಮ ವಿರುದ್ಧ ಯಾರು ಎಷ್ಟು ಮಾತನಾಡುತ್ತಾರೋ ಮಾತನಾಡಲಿ. ನಾವು ಯಾರ ನಾಲಿಗೆಗೂ ಬೀಗ ಹಾಕುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಶಾಸಕರ ಜತೆಗೂ ಸಭೆ : ನಮ್ಮ ಶಾಸಕರ ಜತೆಗೂ ಸಭೆ ಮಾಡಬಹುದಾಗಿತ್ತು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಾವು ಅವರ ಪಕ್ಷದ ಶಾಸಕರ ಜತೆಗೂ ಸಭೆ ಮಾಡುತ್ತೇವೆ. ಅವರ ಜತೆ ಸಭೆ ಮಾಡುವುದಿಲ್ಲ ಎಂದು ಯಾರು ಹೇಳಿದರು?. ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಶಾಸಕರಿಗೆ ಕೊಟ್ಟ ಮಾತಿನಂತೆ ಸಭೆ ಮಾಡುತ್ತಿದ್ದೇವೆ. ಎಲ್ಲರನ್ನೂ ಒಟ್ಟಿಗೆ ಕರೆದು ಜಗಳಕ್ಕೆ ಬಿಡಲು ಸಾಧ್ಯವೇ? ಬೆಂಗಳೂರಿನ ಕೆಲವು ವಾರ್ಡ್ ಗಳಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರು ಇಂದು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಸಾವಿರ ಕೋಟಿ ಬಾಕಿ ಇದ್ದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 170 ಕೋಟಿ ಮಾತ್ರ ಬಾಕಿ ಇದೆ. ಇದೆಲ್ಲವೂ ಸತ್ಯ ಅಲ್ಲವೇ? ಮೊದಲು ನಮ್ಮ ಪಕ್ಷದ ಶಾಸಕರ ಅಹವಾಲು ಆಲಿಸುತ್ತೇವೆ ಎಂದರು.