ನವದೆಹಲಿ/ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ. ಕೂಡಲೇ ದೇವೇಗೌಡರ ಬಳಿ ಕ್ಷಮೆ ಕೇಳುವಂತೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ದೆಹಲಿಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶ ಹಾಗೂ ರಾಜ್ಯಕ್ಕೆ ಸೇವೆ ಸಲ್ಲಿಸಿರುವ ಹಿರಿಯ ನಾಯಕ, ಪೂಜ್ಯ ಸಮಾನರಾದ ದೇವೇಗೌಡರ ಆರೋಗ್ಯದ ಬಗ್ಗೆ ಪಕ್ಷದ ಮುಖಂಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆ ಖಂಡನೀಯ, ಅಮಾನವೀಯ. ನಮ್ಮ ಪಕ್ಷದ ನಾಯಕರಾದ ರಾಜಣ್ಣ ಅವರು ಹಿರಿಯ ನಾಯಕ ದೇವೇಗೌಡರ ಪರಿಸ್ಥಿತಿ ಬಗ್ಗೆ ಆಡಿರುವ ಮಾತನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದರು.
ಪಕ್ಷದ ನಾಯಕನಾಗಿ, ವೈಯಕ್ತಿಕವಾಗಿಯೂ ಇದನ್ನು ಖಂಡಿಸುತ್ತೇನೆ. ಯಾರೇ ನಾಯಕರು ಮಾನವೀಯತೆಯನ್ನು ಮೆರೆಯಬೇಕು. ಸಮಾಜ ಹಾಗೂ ದೇಶಕ್ಕೆ ಸೇವೆ ಮಾಡಿರುವ ಹಿರಿಯ ನಾಯಕರಾದ ದೇವೇಗೌಡರ ಬಗ್ಗೆ ಇಂತಹ ಹೇಳಿಕೆ ನೀಡಿದ್ದು ಸರಿಯಲ್ಲ. ದೇವೇಗೌಡರು ಪ್ರಧಾನಿಯಾಗಲು ಹಿಂದೆ ಕಾಂಗ್ರೆಸ್ ಪಕ್ಷವೇ ಬೆಂಬಲ ನೀಡಿತ್ತು. ನಾವು ದೇವೇಗೌಡರನ್ನು ಬಹಳ ಗೌರವಯುತವಾಗಿ ಕಾಣುತ್ತಿದ್ದೇವೆ. ಅಂತಹ ಹಿರಿಯ ನಾಯಕರ ಆರೋಗ್ಯದ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಕೂಡಲೇ ರಾಜಣ್ಣ ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಕೋರುವಂತೆ ಸೂಚನೆ ನೀಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:'ದೇವೇಗೌಡರ ಬಗ್ಗೆ ಆಡಿದ ಮಾತುಗಳು ವಿಕೃತ ಮನಸ್ಸಿನವು; ಮಧುಗಿರಿಯಲ್ಲಿ ಜನರಿಂದ್ಲೇ ಉತ್ತರ ಕೊಡಿಸುವೆ'
ಡಿ.ಕೆ.ಸುರೇಶ್ ಖಂಡನೆ:ದೇವೇಗೌಡರ ಹಿರಿತನಕ್ಕೆ ನಾವೆಲ್ಲರೂ ತಲೆಬಾಗಬೇಕು. ಸಮಾಜದ ಹಿರಿಯರ ಬಗ್ಗೆ ಇಂತಹ ಹಗುರ ಹೇಳಿಕೆ ನೀಡಿರುವುದು ರಾಜಣ್ಣ ಅವರ ಘನತೆಗೆ ಸೂಕ್ತವಲ್ಲ. ರಾಜಣ್ಣ ಅವರು ಕೂಡಲೇ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಸಮಾಜ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುರೇಶ್ ಎಚ್ಚರಿಸಿದ್ದಾರೆ.