ಬೆಂಗಳೂರು: ಎಐಸಿಸಿ ಅಧ್ಯಕ್ಷರ ಆಯ್ಕೆಗೆ ನಡೆಯುತ್ತಿರುವ ಚುನಾವಣೆಗೆ ಇಂದು ಮತದಾನ ಪ್ರಕ್ರಿಯೆ ನಡೆದಿದೆ. ರಾಜ್ಯ ಕಾಂಗ್ರೆಸ್ ನಾಯಕರು ಮತದಾನ ಮಾಡಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮತಗಟ್ಟೆ ಸ್ಥಾಪನೆ ಮಾಡಿದ್ದು, ಮೂರನೇ ಸಂಖ್ಯೆಯ ಈ ಮತಗಟ್ಟೆಯಲ್ಲಿ ಎಐಸಿಸಿ ಚುನಾವಣಾ ಅಭ್ಯರ್ಥಿಗಳಲ್ಲಿ ಒಬ್ಬರಾದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತದಾನ ಮಾಡಿದ್ದಾರೆ.
ಡಿಕೆಶಿಯಿಂದ ಮತದಾನ:ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ಆಗಮಿಸಿದ ಅವರು ಜೊತೆಯಲ್ಲೇ ತೆರಳಿ ಮತದಾನ ಮಾಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಆರಂಭವಾಗಿರುವ ಮತದಾನ ಪ್ರಕ್ರಿಯೆ ಚುರುಕಾಗಿ ಸಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ ಕೆ ಶಿವಕುಮಾರ್ ಮಾತ್ರವಲ್ಲದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಮತದಾನ ಮಾಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಖರ್ಗೆ, ಶಶಿ ತರೂರ್, ಸೋನಿಯಾರಿಂದ ಮತದಾನ
ಕಾಂಗ್ರೆಸ್ ಪಕ್ಷ ನೀಡಿರುವ ಕ್ಯೂ ಆರ್ ಕೋಡ್ ಹೊಂದಿರುವ ಐಡಿ ಕಾರ್ಡ್ ತೋರಿಸಿ ಮತದಾನ ಪ್ರಕ್ರಿಯೆಯಲ್ಲಿ ನಾಯಕರು ಭಾಗಿಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಪ್ರಥಮ ಮತದಾರರಾಗಿ ಮಲ್ಲಿಕಾರ್ಜುನ ಖರ್ಗೆ ಅವರೇ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮೊದಲಿಗೆ ಮತದಾರರ ಪಟ್ಟಿ ವೀಕ್ಷಣೆ ಮಾಡಿದ ಖರ್ಗೆ, ಪಟ್ಟಿಯಲ್ಲಿ ತಮ್ಮ ಹೆಸರು ಹುಡುಕಿ, 483 ಕ್ರಮ ಸಂಖ್ಯೆ ಮುಂದೆ ಸಹಿ ಹಾಕಿ ನಂತರ ಬ್ಯಾಲೇಟ್ ಬಾಕ್ಸ್ನಲ್ಲಿ ಮತಪತ್ರ ಹಾಕುವ ಮೂಲಕ ಮತದಾನ ಮಾಡಿದರು. ಇವರ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪ್ರತಿಪಕ್ಷ ನಾಯಕರುಗಳು ಹಾಗೂ ಉಪನಾಯಕರು ಮತ್ತು ಮುಖ್ಯ ಸಚೇತಕರುಗಳು ನಂತರ ಮತದಾನಗಳಲ್ಲಿ ಭಾಗಿಯಾಗಿದ್ದಾರೆ.