ಬೆಂಗಳೂರು: ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿಯ ಪರಿಶೀಲನೆ ಮಾಡಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಎರಡು ದಿನಗಳ ಪ್ರವಾಸ ರದ್ದಾಗಿದೆ.
ಆಗಸ್ಟ್ 24 ರಿಂದ 26 ರವರೆಗೆ ಡಿಕೆಶಿ ಬೆಳಗಾವಿ, ಚಿಕ್ಕೋಡಿ, ಜಮಖಂಡಿ, ಮುಧೋಳ ಹಾಗೂ ಬಾಗಲಕೋಟೆಗೆ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದರು. ಇದಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸ್ಥಳೀಯ ಕಾರ್ಯಕರ್ತರಿಗೆ ಕರೆ ನೀಡಲಾಗಿತ್ತು. ನೆರೆ ಪರಿಸ್ಥಿತಿಯ ಪರಿಶೀಲನೆ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಆಯಾ ಜಿಲ್ಲಾ ನಾಯಕರ ಜೊತೆ ಸಭೆ ನಡೆಸಲು ಕೂಡ ನಿರ್ಧರಿಸಲಾಗಿತ್ತು. ನೆರೆ ಪರಿಶೀಲನೆ ಹಾಗೂ ಪಕ್ಷ ಸಂಘಟನೆ ಎರಡು ಉದ್ದೇಶವನ್ನು ಒಂದೇ ಪ್ರವಾಸದ ಮೂಲಕ ನಡೆಸಲು ಡಿಕೆಶಿ ಬಯಸಿದ್ದರು. ಆದರೆ ಇದೀಗ ದಿಢೀರ್ ಪ್ರವಾಸ ರದ್ದಾಗಿದೆ.
ಅನಿವಾರ್ಯ ಕಾರಣಗಳಿಂದ ಪ್ರವಾಸವನ್ನು ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ಕಾರ್ಯಕ್ರಮದ ವಿವರವನ್ನು ನಂತರ ತಿಳಿಸಲಾಗುವುದು ಎಂದು ಹೇಳಲಾಗಿದೆ.
ಆದರೆ ಕಳೆದ ಕೆಲದಿನಗಳಿಂದ ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಡಿಕೆಶಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಿರಂತರ ಪ್ರವಾಸ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿರುವ ಶಿವಕುಮಾರ್ಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ವೈದ್ಯರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆ ತಮ್ಮ ಸದಾಶಿವನಗರ ನಿವಾಸದಲ್ಲಿ ಮುಂದಿನ ಕೆಲ ದಿನ ವಿಶ್ರಾಂತಿ ಪಡೆಯಲಿದ್ದಾರೆ.
ಉತ್ತರ ಕರ್ನಾಟಕ ನೆರೆ ವೀಕ್ಷಣೆ ಪ್ರವಾಸ ರದ್ದು
ವೈದ್ಯರು ಸಾಧ್ಯವಾದಷ್ಟು ದೀರ್ಘ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆ ಶಿವಕುಮಾರ್ ಮುಂದಿನ ಮೂರ್ನಾಲ್ಕು ದಿನ ಸಾರ್ವಜನಿಕರ ಭೇಟಿ ಕಾರ್ಯಕ್ರಮ ಹಾಗೂ ಇತರೆ ಚಟುವಟಿಕೆಯಿಂದ ದೂರ ಉಳಿಯಲಿದ್ದಾರೆ ಎಂಬ ಮಾಹಿತಿ ಇದೆ. ವಿವಿಧ ಮುಖಂಡರ ಭೇಟಿಗೂ ಸಹ ಕಡಿವಾಣ ಬೀಳುವ ಸಾಧ್ಯತೆ ಇದೆ.