ಬೆಂಗಳೂರು: ನವರಾತ್ರಿ ಹಬ್ಬದ ಆಯುಧ ಪೂಜೆ ಸಂದರ್ಭದಲ್ಲಿಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.
ರಾಜರಾಜೇಶ್ವರಿ ನಗರ ಉಪ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿರುವ ಅವರು, ಇರುವ ಕಡಿಮೆ ಅವಧಿಯಲ್ಲಿಯೇ ಪಕ್ಷದ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಇಂದು ಆಯುಧ ಪೂಜೆ ದಿನವಾದರೂ ಕ್ಷೇತ್ರದ ವಿವಿಧೆಡೆ ಸಂಚರಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರ ಪ್ರಚಾರ ಕಾರ್ಯದಲ್ಲಿ ಅವರು ತೊಡಗಲಿದ್ದಾರೆ. ನವೆಂಬರ್ 3ರಂದು ಉಪ ಚುನಾವಣೆಗೆ ಮತದಾನ ನಡೆಯಲಿದ್ದು, ಅತ್ಯಂತ ಕಡಿಮೆ ಅವಧಿ ಇರುವ ಹಿನ್ನೆಲೆ ಅವರು ಬಿಡುವು ಪಡೆಯದೆ ಪ್ರಚಾರ ಕಾರ್ಯ ನಡೆಸಿದ್ದಾರೆ.
ಇಂದು ಎಲ್ಲೆಲ್ಲಿ ಪ್ರಚಾರ
ಕಳೆದ ಎರಡು ದಿನಗಳಿಂದ ನಿರಂತರವಾಗಿ ಕ್ಷೇತ್ರದೆಲ್ಲೆಡೆ ಸುತ್ತಿ ಪ್ರಚಾರ ನಡೆಸುತ್ತಿರುವ ಡಿಕೆಶಿ, ಗುರುವಾರ ಜಾಲಹಳ್ಳಿ ಮತ್ತಿತರ ಭಾಗಗಳಲ್ಲಿ ಪ್ರಚಾರ ನಡೆಸಿದ್ದರು. ಶುಕ್ರವಾರ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದಾರೆ. ಇಂದು ಸಂಜಯನಗರ, ನಂದಿನಿ ಲೇಔಟ್, ಗೊರಗುಂಟೆಪಾಳ್ಯ ಮತ್ತಿತರ ಭಾಗಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.
ಹೆಚ್ಎಂಟಿ ವಾರ್ಡ್ ನಂಬರ್ 38ರ ಸಂಜಯ್ ನಗರ, ಮುನೇಶ್ವರ ನಗರ, ಪೀಣ್ಯ 4 ಹಾಗೂ 1ನೇ ಹಂತ, ಪೀಣ್ಯ ಆಂಜನೇಯ ದೇವಸ್ಥಾನ ರಸ್ತೆ, ಎಸ್ಆರ್ಎಸ್ ಕಾಂಗ್ರೆಸ್ ಕಚೇರಿ ಹತ್ತಿರ, ಆಶ್ರಯ ನಗರ ಗೊರಗುಂಟೆಪಾಳ್ಯ, ರಾಜಕುಮಾರ್ ವೃತ್ತ, ಪೋಜಮ್ಮ ವೃತ್ತ, ಎಂಎಸ್ಕೆ ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಸಂಜೆ 3.30ರಿಂದ ಲಕ್ಷ್ಮೀದೇವಿ ನಗರ ವಾರ್ಡ್ ನಂಬರ್ 42ರಲ್ಲಿ ಪ್ರಚಾರ ಕೈಗೊಳ್ಳಲಿದ್ದು, ಬಳಿಕ ಜೈ ಭುವನೇಶ್ವರಿ ನಗರ, ಸಂಜಯ್ ಗಾಂಧಿ ನಗರ, ನಂದಿನಿ ಲೇಔಟ್, ಅಣ್ಣಮ್ಮ ವೃತ್ತ, ರಾಜಕುಮಾರ್ ವೃತ್ತ, ಭಜನಾ ಮಂದಿರ ಮತ್ತಿತರ ಭಾಗಗಳಲ್ಲಿ ಪ್ರಚಾರ ನಡೆಸಲಿದ್ದಾರೆ.