ಬೆಂಗಳೂರು: ವಿಧಾನಸೌಧದಲ್ಲಿ ವಿದ್ಯಾವಂತ, ಪ್ರಜ್ಞಾವಂತ ಹೆಣ್ಣು ಮಗಳು ನಿಮ್ಮ ಕಷ್ಟಕ್ಕೆ ಧ್ವನಿಯಾಗಿರಲಿ ಎಂದು ಕುಸುಮಾ ಅವರನ್ನು ಕಣಕ್ಕಿಳಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದರು.
ಪ್ರಚಾರ ನಡೆಸಿದ ಡಿಕೆ ಶಿವಕುಮಾರ್ ಪೀಣ್ಯ, ಗೋರಗುಂಟೆ ಪಾಳ್ಯ, ಯಶವಂತಪುರ ಗಾರ್ಮೆಂಟ್ಸ್ಗಳಿಗೆ ಇಂದು ಕುಸುಮಾ ಅವರ ಜತೆಗೆ ತೆರಳಿ, ಅಲ್ಲಿನ ಕಾರ್ಮಿಕರನ್ನು ಖುದ್ದು ಭೇಟಿ ಮಾಡಿ ಮತಯಾಚಿಸಿದರು. ಈ ವೇಳೆ ಡಿ.ಕೆ ಶಿವಕುಮಾರ್ ಅವರು, 'ಒಬ್ಬ ವಿದ್ಯಾವಂತ ಹೆಣ್ಣು ಮಗಳು ಸಂಸಾರದಲ್ಲಿ ನೊಂದು, ಬೆಂದಿದ್ದಾಳೆ. ತನ್ನ ದುಃಖ ಮರೆಯಲು ನಿಮ್ಮ ಸೇವೆ ಮಾಡಲು ಬಂದಿದ್ದಾಳೆ. ವಿದ್ಯಾವಂತ, ಪ್ರಜ್ಞಾವಂತ ಹಾಗೂ ನೊಂದ ಹೆಣ್ಣು ಮಗಳು ವಿಧಾನಸೌಧದಲ್ಲಿ ನಿಮ್ಮ ಧ್ವನಿಯಾಗಿರಲಿ ಎಂದು ಈಕೆಯನ್ನು ಕಣಕ್ಕಿಳಿಸಿದ್ದೇವೆ. ಅವರ ಜತೆ ನಾವಿದ್ದೇವೆ. ನಿಮ್ಮ ಫ್ಯಾಕ್ಟರಿ ಮಾಲೀಕರು, ಮುಖ್ಯಸ್ಥರು ಕುಸುಮಾ ಅವರಿಗೆ ಒಳ್ಳೆಯದಾಗಲಿ ಎಂದು ನಮ್ಮನ್ನು ಕರೆಸಿ, ನಿಮ್ಮ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ.
ನಾನು ವೈಯಕ್ತಿಕವಾಗಿ ಹಾಗೂ ಪಕ್ಷದ ಪರವಾಗಿ ಅವರಿಗೂ ಹಾಗೂ ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕುಸುಮಾ ಅವರು ನಿಮ್ಮ ಧ್ವನಿಯಾಗಿರುತ್ತಾರೆ. ಕೊರೊನಾ ಬಂದ ಮೇಲೆ ಎಷ್ಟೋ ಕಾರ್ಖಾನೆ ಮುಚ್ಚಲಾಗಿದೆ. ಆದರೆ ನಿಮ್ಮ ಮಾಲೀಕರು ಧೈರ್ಯ ಕಳೆದುಕೊಳ್ಳದೇ ಇನ್ನೂ ನಡೆಸುತ್ತಿದ್ದಾರೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ. ಹೆಣ್ಣು ಕುಟುಂಬದ ಕಣ್ಣು ಅಂತಾ ನೀವೆಲ್ಲರೂ ನಿಮ್ಮ ಕುಟುಂಬದವರನ್ನು ರಕ್ಷಣೆ ಮಾಡುತ್ತಿರುವ ರೀತಿಯಲ್ಲೇ ಕುಸುಮಾ ಅವರು ನಿಮ್ಮ ಮನೆ ಮಗಳೆಂದು ರಕ್ಷಣೆ ಮಾಡಬೇಕು. ಆಕೆಗೆ ಶಕ್ತಿ ತುಂಬಬೇಕು. ನಿವೆಲ್ಲರೂ ನವೆಂಬರ್ 3ನೇ ತಾರೀಖು ಕುಸುಮಾ ಅವರಿಗೆ ಮತ ಹಾಕಬೇಕು. ನಿಮ್ಮ ಮನೆ ಸದಸ್ಯರು, ಸ್ನೇಹಿತರು, ಅಕ್ಕ ಪಕ್ಕದವರಿಗೆ ಹೇಳಿ ಮತ ಹಾಕಿಸಬೇಕು. ಬೇರೆ ಪಕ್ಷದವರೂ ಏನು ಬೇಕಾದರೂ ಹೇಳಿಕೊಳ್ಳಲಿ. ಕೊರೊನಾ ಸಮಯದಲ್ಲಿ ನಿಮಗಾಗಲಿ ಅಥವಾ ನಿಮ್ಮ ಫ್ಯಾಕ್ಟರಿ ಮಾಲೀಕರಿಗಾಗಲಿ ಏನೂ ಮಾಡಲಿಲ್ಲ. ಯಾರಾದರೂ ನಿಮಗೆ ಅನ್ನ, ಬಟ್ಟೆ, ಆಶ್ರಯ ಕೊಟ್ಟರಾ? ಕೊಡಲಿಲ್ಲ. ಆದರೆ ಈಗ ಮತ ಹಾಕಿ ಅಂತಾ ಕೇಳುತ್ತಿದ್ದಾರೆ.
ಒಬ್ಬ ವ್ಯಕ್ತಿಯ ಸ್ವಾರ್ಥಕ್ಕಾಗಿ ಈ ಚುನಾವಣೆ ಬಂದಿದೆ. ಈ ಹಿಂದೆ ನೀವು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದೀರಿ. ಅವರು ರಾಜೀನಾಮೆ ಕೊಟ್ಟು ಬೇರೆ ಪಕ್ಷ ಸೇರಿದ್ದಕ್ಕೆ ಈ ಚುನಾವಣೆ ಬಂದಿದೆ ಎಂದರು
ಮಾಧ್ಯಮದವರಿಗೆ ಕೊಟ್ಟ ಪ್ರತಿಕ್ರಿಯೆ:ನಾವು ನಿನ್ನೆಯವರೆಗೂ ಸಾರ್ವಜನಿಕ ಸಭೆಗಳನ್ನು ಮಾಡಿದ್ದೇವೆ. ಈ ಕ್ಷೇತ್ರದಲ್ಲಿ 42,000 ಕಾರ್ಮಿಕರಿದ್ದು, ಇವರನ್ನು ಭೇಟಿ ಮಾಡಲು ಒಂದು ಅವಕಾಶ ಸಿಕ್ಕಿದೆ. ಇವರನ್ನು ಭೇಟಿ ಮಾಡಿ ಮತಯಾಚನೆ ಮಾಡುತ್ತಿದ್ದೇವೆ. ಈ ಚುನಾವಣೆಗೆ ಕಾರಣರಾದವರು ಎಲ್ಲೆಲ್ಲಿ ಹಣ ಹಂಚಿದ್ದಾರೆ ಎಂಬುದರ ವಿಡಿಯೋ ದಾಖಲೆಗಳು ನಮ್ಮ ಬಳಿ ಇವೆ. ಯಾರು, ಯಾರು ಯಾರು ಯಾರಿಗೆ ಹೇಳಿ ಏನೇನು ವಿಡಿಯೋ ಮಾಡಿಸಿದ್ದಾರೆ ಎಂಬುದೂ ನಮಗೆ ಗೊತ್ತು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸಿ ಕಿರುಕುಳ ನೀಡಿರುವುದೇ ಅವರ ಸಾಧನೆ.ಎದುರಾಳಿ ಅಭ್ಯರ್ಥಿ ಆಣೆ, ಪ್ರಮಾಣದ ಮಾತಾಡಿದ್ದಾರೆ. ಚುನಾವಣೆ ಮುಗಿಯಲಿ. ಆಮೇಲೆ ಆ ಬಗ್ಗೆ ಗಮನ ಹರಿಸುತ್ತೇವೆ ಎಂದರು.