ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಹೆಚ್ಎಂಟಿ ಬಡಾವಣೆಯ ಜೆಪಿ ಪಾರ್ಕ್ನಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಪರ ಶುಕ್ರವಾರ ರಾತ್ರಿ ಕಾರ್ಯಕರ್ತರ ಸಭೆ ನಡೆಸಿದರು.
ವಿವಿಧ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಸಿದ್ದು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಹೆಚ್ಎಂಟಿ ವಾರ್ಡ್ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹಿರಿಯ ನಾಯಕರೊಂದಿಗೆ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪ್ರಚಾರ ನಡೆಸಿದರು. ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಕೃಷ್ಣಬೈರೇಗೌಡ ಪಾಲ್ಗೊಂಡು ಅಭ್ಯರ್ಥಿ ಪರ ಮತಯಾಚಿಸಿದರು. ಎಂಎಲ್ಸಿ ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಡಿಕೆಶಿ, ಕ್ಷೇತ್ರದ ಜೆಡಿಎಸ್ ಅಧ್ಯಕ್ಷರು ಸೇರಿದಂತೆ 350ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕ್ಷೇತ್ರದ ಜನರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಮತ್ತೊಮ್ಮೆ ಆಯ್ಕೆ ಮಾಡುವ ಸುವರ್ಣ ಅವಕಾಶ ದೊರೆತಿದೆ. ನಿಮಗೆ ಹೇಳದೆ ಕೇಳದೆ ನಿಮ್ಮ ಮತವನ್ನು ಮಾರಿಕೊಂಡ ವ್ಯಕ್ತಿಗೆ ಸರಿಯಾದ ಬುದ್ಧಿ ಕಲಿಸಿ, ಒಬ್ಬ ವಿದ್ಯಾವಂತ ಹೆಣ್ಣುಮಗಳನ್ನು ಆಯ್ಕೆ ಮಾಡಿ ಕಳಿಸಿಕೊಡಿ ಎಂದರು.
ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀದೇವಿ ನಗರ ವಾರ್ಡ್ನಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದರು. ನಿಮ್ಮ ಎಲ್ಲಾ ಕಷ್ಟಗಳಿಗೂ ನಾನು ಸ್ಪಂದಿಸುತ್ತೇನೆ. ಕನಕಪುರ ಕ್ಷೇತ್ರದಷ್ಟೇ ಈ ಕ್ಷೇತ್ರವನ್ನು ಹಾಗೂ ಇಡೀ ರಾಜ್ಯವನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇನೆ ಎಂದರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಹೆಚ್.ಎಂ.ರೇವಣ್ಣ, ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ ಹಾಗೂ ಪಾಲಿಕೆ ಸದಸ್ಯ ಶಿವರಾಜ್ ಇದ್ದರು.