ಬೆಂಗಳೂರು:ಯಾರೂ ಕೂಡ ತಮ್ಮ ಜನ್ಮದಿನ ಆಚರಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ತಮ್ಮ ಜನ್ಮದಿನವನ್ನು ಆಚರಿಸಬಾರದು. ಫ್ಲೆಕ್ಸ್, ಕಟೌಟ್, ಭಿತ್ತಿಚಿತ್ರ, ಪೋಸ್ಟರ್ ಯಾವುದನ್ನೂ ಹಾಕಬಾರದು ಎಂದು ತಿಳಿಸಿದ್ದಾರೆ.
ಈ ತಿಂಗಳು 12ರಿಂದ 18ರವರೆಗೆ ತಾವು ಊರಿನಲ್ಲಿ ಇರುವುದಿಲ್ಲ. ರಾಜಸ್ಥಾನದ ಉದಯಪುರದಲ್ಲಿ ನಡೆಯುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳಲು ತೆರಳಲಿದ್ದೇನೆ. ಹೀಗಾಗಿ ಜನ್ಮದಿನ ಮೇ 15ರಂದು ಯಾರಿಗೂ ಸಿಗುವುದಿಲ್ಲ. ಆ ದಿನ ಯಾರೂ ಕೂಡ ಶುಭಾಶಯ ಹೇಳಲು, ಅಭಿನಂದಿಸಲು ಮನೆ ಬಳಿ ಬರಬಾರದು ಎಂದು ವಿನಮ್ರವಾಗಿ ವಿನಂತಿಸುತ್ತೇನೆ. ಇದನ್ನು ಯಾರೂ ತಪ್ಪಾಗಿ ಭಾವಿಸಬಾರದು ಎಂದು ಹೇಳಿದ್ದಾರೆ.