ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆ: ದಾವಣಗೆರೆಯತ್ತ ಸಿದ್ದರಾಮಯ್ಯ, ಚಿತ್ರದುರ್ಗದತ್ತ ಡಿಕೆಶಿ ಪ್ರಯಾಣ - ಜಕ್ಕೂರು ವಿಮಾನ ನಿಲ್ದಾಣಕ್ಕೆ ತೆರಳಿದರು

ಪ್ರಜಾಧ್ವನಿ ಯಾತ್ರೆಯಲ್ಲಿ ಬ್ಯುಸಿಯಾದ ಕೈ ನಾಯಕರು- ಉತ್ತರ ಕರ್ನಾಟಕದತ್ತ ಸಿದ್ದರಾಮಯ್ಯ, ದಕ್ಷಿಣ ಕರ್ನಾಟಕದತ್ತ ಡಿಕೆಶಿ ಚಿತ್ರ- ಅಧಿಕಾರ ಗದ್ದುಗೆಗೆ ಭರ್ಜರಿ ಪ್ರಚಾರ

CONGRESS PRAJADWANI TOUR
ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆ

By

Published : Feb 9, 2023, 12:31 PM IST

ಬೆಂಗಳೂರು: ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗುವ ಹಿನ್ನೆಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಾವಣಗೆರೆಯತ್ತ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಿತ್ರದುರ್ಗದತ್ತ ಪ್ರಯಾಣ ಬೆಳೆಸಿದ್ದಾರೆ. ದಾವಣಗೆರೆ ಜಿಲ್ಲಾ ಪ್ರವಾಸಕ್ಕೆ ತೆರಳಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸದಿಂದ ಜಕ್ಕೂರು ವಿಮಾನ ನಿಲ್ದಾಣಕ್ಕೆ ತೆರಳಿದರು. ಅಲ್ಲಿಂದ ಹರಿಹರದ ರಾಜನಹಳ್ಳಿಗೆ ತೆರಳಿರುವ ಅವರು ಮಹರ್ಷಿ ವಾಲ್ಮೀಕಿ ಜಾತ್ರ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಹರಿಹರ ಶಾಸಕ ರಾಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಲಿರುವ ಅವರು ಇಂದು ಸಂಜೆ ಬೆಂಗಳೂರಿಗೆ ವಾಪಸ್ ಅಗಲಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್ ನಾಯಕರು ಪ್ರಜಾಧ್ವನಿ ಬಸ್ ಯಾತ್ರೆಯ ಎರಡನೇ ಹಂತದ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ಈ ಮಧ್ಯವೇ ಪಕ್ಷದ ಶಾಸಕರು, ಮಾಜಿ ಸಚಿವರು, ಹಿರಿಯ ಮುಖಂಡರನ್ನು ಭೇಟಿಯಾಗಿ ಚರ್ಚಿಸುತ್ತಿದ್ದಾರೆ. ಈ ಸಾರಿಯೂ ದಾವಣಗೆರೆ ಜಿಲ್ಲೆಯ ಸ್ಥಿತಿಗತಿ ಕುರಿತು ಚರ್ಚಿಸಲು ಸಿದ್ದರಾಮಯ್ಯ ಅವರು ಹರಿಹರ ಶಾಸಕ ರಾಮಪ್ಪ ನಿವಾಸಕ್ಕೆ ತೆರಳಿ ಭೋಜನದ ಜತೆ ಚರ್ಚೆ ನಡೆಸಲಿದ್ದಾರೆ.

ಡಿಕೆಶಿ ಪ್ರವಾಸ:ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಪ್ರವಾಸ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಲ್ಲಿನ ಹೊಸದುರ್ಗದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3ಕ್ಕೆ ಚಿತ್ರದುರ್ಗದ ಹೊಳಲ್ಕೆರೆಗೆ ತೆರಳಿ ಅಲ್ಲಿ ಸಭೆ ನಡೆಸಲಿದ್ದಾರೆ. ಸಂಜೆ 5ಕ್ಕೆ ಚಿತ್ರದುರ್ಗದಲ್ಲಿ ಪ್ರಜಾಧ್ವನಿ ಯಾತ್ರೆಯ ಸಮಾವೇಶ ನಡೆಯಲಿದ್ದು ಅದರಲ್ಲಿ ಭಾಗಿಯಾಗಲಿದ್ದಾರೆ.

ಒಂದೆಡೆ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದರೆ, ಡಿಕೆಶಿವಕುಮಾರ್ ದಕ್ಷಿಣ ಕರ್ನಾಟಕದಲ್ಲಿ ಯಾತ್ರೆಯಲ್ಲಿದ್ದಾರೆ. ಇಂದು ಮಧ್ಯ ಕರ್ನಾಟಕದ ಅಕ್ಕಪಕ್ಕದ ಜಿಲ್ಲೆಯಲ್ಲೇ ಇಬ್ಬರೂ ನಾಯಕರು ತೆರಳುತ್ತಿರುವುದು ವಿಶೇಷ. ರಾಜ್ಯ ವಿಧಾನ ಮಂಡಲ ಅಧಿವೇಶನ ನಾಳೆ ಆರಂಭವಾಗಲಿದ್ದು, ಇಬ್ಬರೂ ನಾಯಕರು ರಾಜ್ಯಪಾಲರ ಭಾಷಣಕ್ಕೆ ಹಾಜರಾಗುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಕಡೆಯ ಕ್ಷಣದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಅಧಿವೇಶನದಲ್ಲಿ ಭಾಗಿಯಾಗಲಿರುವ ನಾಯಕರು:ನಾಳೆ ನಡೆಯುವ ರಾಜ್ಯಪಾಲರ ಭಾಷಣ ವೇಳೆ ನಿಗದಿಯಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿನ ಪ್ರವಾಸ ಮುಗಿಸಿ ಸಂಜೆ ಬೆಂಗಳೂರಿಗೆ ವಾಪಾಸಾಗಲಿದ್ದಾರೆ. ನಾಳೆ ಅವರು ಅಧಿವೇಶನದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಆದರೆ, ಸಿದ್ದರಾಮಯ್ಯ ಇಂದು ಸಂಜೆ ಬೆಂಗಳೂರಿಗೆ ವಾಪಾಸಗಲಿದ್ದಾರೆ. ಫೆ.10ರಂದು ಬೆಂಗಳೂರಿನಿಂದ ಸುರಪುರ ತಲುಪಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ನಂತರ ಶಹಪೂರ ತಲುಪಿ ಸಭೆ ನಡೆಸುವರು. ಅಲ್ಲಿಂದ ಕಲಬುರುಗಿಗೆ ಅಗಮಿಸಿ ಅಲ್ಲಿ ಉತ್ತರ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರಗಳ ಜಂಟಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಂದು ಕಲಬುರುಗಿಯಲ್ಲೇ ವಾಸ್ತವ್ಯ ಹೂಡುವ ಸಿದ್ದರಾಮಯ್ಯ ಫೆ.11 ರಂದು ಅಲ್ಲಿಂದ 90 ಕಿ.ಮೀ. ಕಾರಲ್ಲಿ ತೆರಳಿ ಸಿಂದಗಿಯಲ್ಲಿ ಸಭೆ ನಡೆಸುವರು. ಇದಾದ ಬಳಿಕ ಇಂಡಿ, ನಾಗಠಾಣಸಲ್ಲಿ ಸಭೆ ನಡೆಸಿ ವಿಜಯಪುರಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಫೆ.13ರವರೆಗೂ ಬೆಂಗಳೂರಿನತ್ತ ಬಾರದ ಸಿದ್ದರಾಮಯ್ಯ ಫೆ.13 ರಂದು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಲಿದ್ದಾರೆ.

ಸದ್ಯ ಕಾಂಗ್ರೆಸ್ ನಾಯಕರು ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿದ್ದು, ಹೆಚ್ಚಾಗಿ ಜನರ ಬಳಿ ತೆರಳಲು ಹಾಗೂ ಇರಲು ಬಯಸುತ್ತಿದ್ದಾರೆ. ಮುಂದಿನ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, 2018ರಲ್ಲಿ ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯುವ ಯತ್ನದಲ್ಲಿ ಕಾಂಗ್ರೆಸ್ ಇದೆ.

ಇದನ್ನೂ ಓದಿ:"ನಮ್ಮ ಕ್ಲಿನಿಕ್"ನಲ್ಲಿ 12 ಆರೋಗ್ಯ ಸೇವೆಗಳ ಪ್ಯಾಕೇಜ್ ಲಭ್ಯ; ರಾಜ್ಯಾದ್ಯಂತ ಒಟ್ಟು 438 "ನಮ್ಮ ಕ್ಲಿನಿಕ್‌" ಓಪನ್​

ABOUT THE AUTHOR

...view details