ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವ ಕುಸುಮಾ ರವಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಐಎಎಸ್ ಅಧಿಕಾರಿಯಾಗಿದ್ದ ಡಿ ಕೆ ರವಿ ಅವರ ಪತ್ನಿ ಹಾಗೂ ರಾಜಕಾರಣಿ ಹನುಮಂತರಾಯಪ್ಪ ಪುತ್ರಿಯಾಗಿರುವ ಕುಸುಮಾ ಕೆಪಿಸಿಸಿ ಕಚೇರಿಗೆ ಆಗಮಿಸಿ ಕಾಂಗ್ರೆಸ್ ಸೇರ್ಪಡೆಯಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದರು.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ ಪರಮೇಶ್ವರ್ ಸಮ್ಮುಖದಲ್ಲಿ ಬೆಳಗ್ಗೆ 11.45ರ ಶುಭ ಗಳಿಗೆಯಲ್ಲಿ ಕಾದು ಕಾಂಗ್ರೆಸ್ ಸದಸ್ಯತ್ವ ಪಡೆದರು.
ಕೆಪಿಸಿಸಿ ಕಚೇರಿಗೆ 10-40 ಕ್ಕೆ ಕುಟುಂಬ ಸಮೇತವಾಗಿ ಆಗಮಿಸಿದ ಹನುಮಂತರಾಯಪ್ಪ, ಮಗಳು ಕುಸುಮಾ ಕುಟುಂಬ ಶುಭ ಗಳಿಗೆಗೆ ಸುಮಾರು 1 ಗಂಟೆ ಕಾಲ ಕಾದು ನಂತರವೇ ಪಕ್ಷ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಕುಸುಮಾ ಪಕ್ಷದ ಸದಸ್ಯತ್ವ ಪತ್ರ ಪಡೆದರು. ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ರಾಜಕುಮಾರ್, ಹನುಮಂತರಾಯಪ್ಪ ಕುಟುಂಬಸ್ಥರು ಈ ವೇಳೆ ಹಾಜರಿದ್ದರು.