ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ರಾಜ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ - High Court
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ಸಂಪತ್ ರಾಜ್ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಫೆ. 2ಕ್ಕೆ ಮುಂದೂಡಿದೆ.
ಸಂಪತ್‌ರಾಜ್ ಸಲ್ಲಿಸಿರುವ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸಿಸಿಬಿ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕ ಪಿ.ಪ್ರಸನ್ನಕುಮಾರ್, ಯಾವುದಾದರೂ ಪ್ರಕರಣದಲ್ಲಿ ಹಾಲಿ ಶಾಸಕರು ದೂರುದಾರರು ಇದ್ದರೆ ಅಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಪೀಠ ನಿಗದಿಪಡಿಸಲಾಗಿದೆ. ಈ ಪ್ರಕರಣದಲ್ಲಿ ದೂರುದಾರರು ಮತ್ತು ಪ್ರತಿವಾದಿ ಹಾಲಿ ಶಾಸಕ ಆಗಿರುವುದರಿಂದ ಪ್ರಕರಣವು ನಿಗದಿತ ವಿಶೇಷ ಪೀಠದ ಮುಂದೆ ಬರಬೇಕಿದೆ ಎಂದು ಕೋರ್ಟ್ಗೆ ಮನವರಿಕೆ ಮಾಡಿದರು. ಇದನ್ನು ಪರಿಗಣಿಸಿದ ಪೀಠ ವಿಚಾರಣೆಯನ್ನು ಫೆ. 2ಕ್ಕೆ ಮುಂದೂಡಿತು.
ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಲು ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡಿದ ಆರೋಪದಡಿ ಜೈಲು ಸೇರಿರುವ ಸಂಪತ್ ರಾಜ್ ಜಾಮೀನು ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಸಂಪತ್ ರಾಜ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 67ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಡಿ. 1ರಂದು ತಿರಸ್ಕರಿಸಿತ್ತು. ಈ ಹಿನ್ನೆಲೆ ಜಾಮೀನಿಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ಘಟಕ ಮತ್ತು ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಯನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ.