ಬೆಂಗಳೂರು: ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರಿಂದ NIA ಸಾಕಷ್ಟು ಮಾಹಿತಿ ಪಡೆದಿದೆ. 18 ಜನ ಪೊಲೀಸರ ಹೇಳಿಕೆ ದಾಖಲಿಸಿಕೊಂಡಿದ್ದು, ಇದರ ಮೇಲೆ ಇಂದಿನಿಂದ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಎನ್ಐಎ ತನ್ನ ತನಿಖೆಯನ್ನು ಚುರುಕುಗೊಳಿಸಿದೆ.
ಡಿ ಜೆ-ಕೆ ಜಿ ಹಳ್ಳಿ ಗಲಭೆ ಪ್ರಕರಣ: 18 ಮಂದಿ ಪೊಲೀಸರ ಹೇಳಿಕೆ ದಾಖಲಿಸಿಕೊಂಡ NIA - kg halli case investigation
ಎನ್ಐಎ ಹಿರಿಯ ಅಧಿಕಾರಿಗಳು ನಗರದಲ್ಲೇ ಮೊಕ್ಕಾಂ ಹೂಡಿದ್ದು, ಡಿ ಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ಮತ್ತಷ್ಟು ಚುರುಕು ಪಡೆದಿದೆ.
ಪ್ರಕರಣ ಕೈಗೆತ್ತಿಕೊಂಡ ದಿನ ಸುಮಾರು 30 ಕಡೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಬಹುತೇಕ ಮಾಹಿತಿ ಲಭ್ಯವಾದ ಕಾರಣ ತನಿಖಾಧಿಕಾರಿಗಳ ಹೇಳಿಕೆಯನ್ನು ಎನ್ಐಎ ಪಡೆದಿದೆ. ಘಟನೆ ಯಾವಾಗ ಆಯ್ತು? ಹೇಗೆ ನಡೆದಿತ್ತು? ಎಷ್ಟು ಜನ ಗಲಭೆ ನಡೆಸಿದ್ದರು? ಗಲಭೆಯ ನಂತರದಲ್ಲಿ ಏನೆಲ್ಲಾ ಆಯ್ತು? ಈವರೆಗೆ ಏಕೆ 200 ಜನರನ್ನು ಬಂಧಿಸಿದ್ದೀರಾ? ಅವರ ಪಾತ್ರವೇನು? ಬಾಟಲ್ ಹಿಡಿದು ಹೊಡೆಯಲು ಬಂದ್ರಾ? ಪೆಟ್ರೋಲ್ ಮೂಲಕ ಬೆಂಕಿ ಹಚ್ಚಿದ್ರಾ? ಪೊಲೀಸರ ರೈಫಲ್ ಕಿತ್ತುಕೊಂಡು ಹೊಡೆಯಲು ಬಂದ್ರಾ? ಎಸ್ಡಿಪಿಐ ಪಾತ್ರವೇನು? ಹೀಗೆ ಹಲವು ಮಾಹಿತಿ ಕಲೆಹಾಕಿದ್ದಾರೆ.
ಎನ್ಐಎ ಅಧಿಕಾರಿಗಳಿಗೆ ಈವರೆಗೆ ಇದೇ ಆಧಾರದ ಮೇಲೆ 200 ಜನರನ್ನು ಬಂಧಿಸಿರುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಇಂದು ಕೂಡ ತನಿಖೆ ಮುಂದುವರೆದಿದ್ದು, ಘಟನೆಯ ಬಗ್ಗೆ ಸಿಕ್ಕಿರುವ ಎಲ್ಲಾ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಲು ಮುಂದಾಗಿದೆ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಮತ್ತಷ್ಟು ಆರೋಪಿಗಳನ್ನು ಎನ್ಐಎ ಬಂಧಿಸಲು ಮುಂದಾಗಿದೆ.