ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತನಿಖೆ ಮುಂದುವರೆದಿದ್ದು, ಈವರೆಗೆ ಯಾವುದೇ ಅಮಾಯಕರನ್ನೂ ಸಹ ಬಂಧಿಸಿಲ್ಲವೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ.
ಗಲಭೆ ಪ್ರಕರಣದ ತನಿಖೆ ಕುರಿತು ಕಮಲ್ ಪಂತ್ ಮಾಹಿತಿ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಇಲ್ಲಿಯವರೆಗೆ 377 ಆರೋಪಿಗಳನ್ನು ಬಂಧಿಸಲಾಗಿದ್ದು, ಕೆಲವರನ್ನ ಬಿಡುಗಡೆ ಮಾಡಿ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೆ ಒಟ್ಟು 65 ಕೇಸ್ಗಳು ದಾಖಲಾಗಿದ್ದು, ಅದರಲ್ಲಿ 3 ಕೇಸ್ ಸಿಸಿಬಿ ಬಳಿ ಇವೆ. ಇನ್ನುಳಿದಂತೆ 62 ಕೇಸ್ಗಳನ್ನು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ತನಿಖೆ ಮಾಡಲಾಗ್ತಿದೆ ಎಂದು ಮಾಹಿತಿ ನೀಡಿದರು.
ಈ ಗಲಭೆ ಪ್ರಕರಣದಿಂದಾಗಿ 10 ಕೋಟಿಯಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿ ಸೇರಿದಂತೆ ಇನ್ನಿತರ ನಷ್ಟ ಸಂಭವಿಸಿದೆ ಎಂಬುದು ಪ್ರಾಥಮಿಕ ಹಂತದಲ್ಲಿ ಗೊತ್ತಾಗಿದೆ. ಘಟನೆ ಸಂಬಂಧ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ನನ್ನನ್ನು ಎರಡು ಸಲ ಭೇಟಿ ಮಾಡಿದ್ದಾರೆ. ತನಿಖೆಯ ಬಗ್ಗೆ ಅವರಿಗೆ ಸಮಾಧಾನವಾಗಿದೆ ಎಂದು ಪಂತ್ ಹೇಳಿದ್ದಾರೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಜನ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಗಳ ಪೋಷಕರು ಆರೋಪಿಸಿದ್ದಾರೆ. ಆದರೆ ನಾವು ಇದೂವರೆಗೆ ಅಂಥಹವರನ್ನು ಅರೆಸ್ಟ್ ಮಾಡಿಲ್ಲ, ಡಿಜಿಟಲ್ ಎವಿಡೆನ್ಸ್ ಆಧಾರದ ಮೇಲೆಯೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.