ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ, ಬೆಂಗಳೂರಿಗೆ ಒಂದು ಕಳಂಕವಾಗಿದ್ದು, ಅದರ ನೇರ ಪಾತ್ರಧಾರರು ಕಾಂಗ್ರೆಸ್ ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರಣ ಇಲ್ಲದೆ ನಡೆದ ಘಟನೆಯಾಗಿದೆ. ವೈಯಕ್ತಿಕ ದ್ವೇಷ, ಹೊತ್ತಿ ಉರಿಯುತ್ತಿರುವ ದಳ್ಳುರಿ, ಒಳ ಜಗಳ, ಅಂತರ್ಯುದ್ಧದಿಂದ ಇಡೀ ಬೆಂಗಳೂರಿಗೆ ಕಪ್ಪು ಚುಕ್ಕೆ ತಂದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ ಎಂದು ಕಿಡಿಕಾರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲಾಕ್‌ಡೌನ್ ಸಂದರ್ಭ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಚೆಕ್ ಹಿಡಿದುಕೊಂಡು ಓಡಾಡಿದ್ದಾರೆ. ಅದನ್ನು ನೋಡಿದ್ದೇವೆ. ಆದರೆ, ಆ ಚೆಕ್ ಕ್ಯಾಶ್ ಆಗಿರುವುದನ್ನು ನಾನು ನೋಡಿಲ್ಲ. ಸರ್ಕಾರದಿಂದ 4 ಲಕ್ಷ ಕಾರ್ಮಿಕರನ್ನು ವಿವಿಧ ಭಾಗಗಳಿಗೆ ಕಳುಹಿಸಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಸಿಎಂ ಹಾಗೂ ಪಿಎಂ ಕೇರ್ ನಿಧಿಗೆ ಹಣ ಕೊಡಬಹುದಿತ್ತು. ಅದನ್ನು ಅವರು ಮಾಡಿಲ್ಲ. ಅವರ ಚೆಕ್ ಬರೀ ಗಾಳಿಯಲ್ಲಿ ಓಡಾಡುತ್ತಿದೆ. ಗಾಳಿ ಹಾಕಿಕೊಳ್ಳಲು ಚೆಕ್ ಬಳಸಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಗೃಹ ಸಚಿವರಲ್ಲಿ ಕ್ಷಮೆಯಾಚಿಸಬೇಕು: ಗೃಹ ಸಚಿವ ಬೊಮ್ಮಾಯಿ ವಿರುದ್ಧ ಏಕವಚನ ಬಳಸಿ, ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ವಿಷಾದ ವ್ಯಕ್ತಪಡಿಸಿದರೆ ಸಾಲದು. ಡಿ.ಕೆ. ಶಿವಕುಮಾರ್ ಗೃಹ ಸಚಿವರ ಬಳಿ ಕ್ಷಮೆಯಾಚಿಸಬೇಕು ಎಂದು ಸಚಿವ ಅಶೋಕ್ ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿಗಳ ಮಗ ಹಾಗೂ ರಾಜ್ಯದ ಗೃಹ ಸಚಿವರು ಅವರ ಬಗ್ಗೆ ಇಂಥ ಹೇಳಿಕೆ ನೀಡುವುದು ಅಪರಾಧ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಅಂತಾರೆ. ಡಿಕೆಶಿ ರಾಜಕೀಯದಲ್ಲಿ ಬಹಳ ಆಸೆ ಇಟ್ಟುಕೊಂಡಿದ್ದಾರೆ. ಬಹಳ ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಇರುವವರು. ಇದು ಅವರ ರಾಜಕೀಯಕ್ಕೆ ಒಂದು ಹಂಪ್ ಆಗುತ್ತದೆ. ಇದಕ್ಕೆ ಅವರು ಆ ಹೇಳಿಕೆ ಕೊಟ್ಟಾಗಲೇ ಇತಿಶ್ರೀ ಹಾಡಬಹುದಾಗಿತ್ತು. ಒಂದು ದಿನದ ಬಳಿಕ ವಿಷಾದ ವ್ಯಕ್ತಪಡಿಸಿದ್ದಾರೆ. ವಿಷಾದ ಅಲ್ಲ, ಕ್ಷಮೆ ಕೇಳಬೇಕೆಂದು ಎಂದರು.