ಕರ್ನಾಟಕ

karnataka

ETV Bharat / state

ಡಿ.ಜೆ ಹಳ್ಳಿ ಗಲಭೆ: ಕ್ಲೇಮ್ ಕಮಿಷನರ್ ಸಿಬ್ಬಂದಿಗೆ ವೇತನ ಪಾವತಿಸದ ಸರ್ಕಾರ, ಹೈಕೋರ್ಟ್ ಬೇಸರ

ಗಲಭೆ ಪ್ರಕರಣದಲ್ಲಿನ ನಷ್ಟ ಅಂದಾಜಿಸಿ ಹೊಣೆಗಾರಿಕೆ ನಿಗದಿಪಡಿಸಲು ಕ್ಲೇಮ್ ಕಮಿಷನರ್ ನಿಯೋಜಿಸಬೇಕು ಹಾಗೂ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಹೈಕೋರ್ಟ್ ಬೇಸರ
ಹೈಕೋರ್ಟ್ ಬೇಸರ

By

Published : Jul 9, 2021, 6:35 PM IST

ಬೆಂಗಳೂರು : ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ಆದ ಆಸ್ತಿ ನಷ್ಟ ಅಂದಾಜಿಸಲು ಹಾಗೂ ಹೊಣೆಗಾರಿಕೆ ನಿಗದಿಪಡಿಸಲು ನಿಯೋಜಿಸಿರುವ ಕ್ಲೇಮ್ ಕಮಿಷನರ್ ಸಿಬ್ಬಂದಿಗೆ ವೇತನ ಪಾವತಿಸದ ಕುರಿತು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಇದೇ ವೇಳೆ ಪ್ರತಿ ತಿಂಗಳ ವೇತನವನ್ನು ತಿಂಗಳ ಕೊನೆಯಲ್ಲೇ ಪಾವತಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ಗಲಭೆ ಪ್ರಕರಣದಲ್ಲಿನ ನಷ್ಟ ಅಂದಾಜಿಸಿ ಹೊಣೆಗಾರಿಕೆ ನಿಗದಿಪಡಿಸಲು ಕ್ಲೇಮು ಕಮಿಷನರ್ ನಿಯೋಜಿಸಬೇಕು ಹಾಗೂ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠ, ಕ್ಲೇಮ್ ಕಮಿಷನ್ ನ ಕಾರ್ಯದರ್ಶಿ ಹಾಗೂ ಸಿಬ್ಬಂದಿಗೆ ನೀಡದೆ ಬಾಕಿ ಉಳಿಸಿಕೊಂಡಿರುವ ವೇತನವನ್ನು ಮುಂದಿನ 2 ವಾರಗಳಲ್ಲಿ ನೀಡಬೇಕು. ಮುಂದಿನ ದಿನಗಳಲ್ಲಿ ಆಯಾ ತಿಂಗಳ ಕೊನೆಯಲ್ಲಿಯೇ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಸಂಭಾವನೆ ಮಾರ್ಪಡಿಸುವ ಕುರಿತು ಕ್ಲೇಮ್ ಕಮಿಷನರ್ ಸಲ್ಲಿಸಿರುವ ಮನವಿಯನ್ನು 1 ತಿಂಗಳ ಒಳಗೆ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಹಾಗೆಯೇ, ಹೆಚ್ಚುವರಿ ವಾಹನಗಳ ಬೇಡಿಕೆಗೆ ಸಂಬಂಧಿಸಿದಂತೆ ಕಮಿಷನ್ ನೀಡಿರುವ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸಬೇಕು ಎಂದು ನಿರ್ದೇಶಿಸಿತು.

ಅಲ್ಲದೇ, ಗಲಭೆ ವೇಳೆ ನಷ್ಟಕ್ಕೀಡಾದ ಜನರು ಪರಿಹಾರ ಕೋರಿ ಸಲ್ಲಿಸಿರುವ ಮನವಿಗಳೆಷ್ಟು, ಈ ಸಂಬಂಧ ಕೈಗೊಂಡಿರುವ ಕ್ರಮಗಳೇನು ಎಂಬುದವರ ಕುರಿತು ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂದು ಕ್ಲೇಮ್ ಕಮಿಷನ್ ನ ಕಾರ್ಯದರ್ಶಿಗೆ ಸೂಚಿಸಿತು. ಇದೇ ವೇಳೆ ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಆರೋಪಿಗಳನ್ನು ಬಂಧಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆಯೇ ತನಿಖಾ ಪ್ರಗತಿ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಎನ್ಐಎಗೆ ಸೂಚಿಸಿ, ವಿಚಾರಣೆ ಮುಂದೂಡಿತು.

ಇದನ್ನೂ ಓದಿ: ಯುಪಿ ಪೊಲೀಸರ ನೋಟಿಸ್ ಪ್ರಶ್ನಿಸಿ ಟ್ವಿಟರ್ ಎಂಡಿ ಅರ್ಜಿ: ಜು.13ಕ್ಕೆ ಹೊರಬೀಳಲಿದೆ ಹೈಕೋರ್ಟ್ ಆದೇಶ

ABOUT THE AUTHOR

...view details