ಬೆಂಗಳೂರು:ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಮತ್ತೋರ್ವ ಆರೋಪಿ ಬಂಧಿಸಿದ್ದಾರೆ.
(34) ವರ್ಷದ ಸೈಯ್ಯದ್ ಸೇತುನನ್ನು ಬಂಧಿಸಿ ವಿಚಾರಣೆಗೊಳಪಡಿಸಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸೈಯ್ಯದ್ ಆ.11 ರಂದು ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಮೇಲೆ ನಡೆದ ಅಟ್ಯಾಕ್ನಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಗಲಭೆ ಎಬ್ಬಿಸುವ ದೃಷ್ಟಿಯಿಂದ ಹಲವರನ್ನು ಕರೆಸಿ, ಗಲಾಟೆ ವೇಳೆ ಠಾಣೆಗೆ ಬೆಂಕಿ ಹಚ್ಚಿದ್ದ ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗಾಗಿ ಎನ್ಐಎ ತಂಡ ಶೋಧ ನಡೆಸುತಿತ್ತು. ಖಚಿತ ಮಾಹಿತಿ ಮೇರೆಗೆ ಡಿ.ಜಿ.ಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಳೆದ ಸೆ.23 ರಂದು ಗಲಭೆ ಸಂಬಂಧ ನಗರದ 30 ಕಡೆಗಳಲ್ಲಿ ದಾಳಿ ನಡೆಸಿ ಪ್ರಕರಣ ಪ್ರಮುಖ ಆರೋಪಿ ಎನ್ನಲಾದ ಸೈಯದ್ ಸಾಧೀಕ್ ಅಲಿ ಎಂಬಾತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಎನ್ಐಎಯಿಂದ ಬಂಧನಕ್ಕೊಳಗಾಗಿರುವ ಸೈಯ್ಯದ್ ಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂದು ತಿಳಿದು ಬಂದಿದೆ.