ಬೆಂಗಳೂರು:ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆಗೆ ಮೂಲ ಕಾರಣನಾದ ಆರೋಪಿ ನವೀನ್ ಜಾಮೀನು ಅರ್ಜಿಯನ್ನು ನಗರದ 1ನೇ ಎಸಿಎಂಎಂ ಕೋರ್ಟ್ ವಜಾಗೊಳಿಸಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ನವೀನ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ಮಧ್ಯಾಹ್ನ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವ ಕಾರಣ ಆರೋಪಿಗೆ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ಅರ್ಜಿ ತಿರಸ್ಕರಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿ ಆರೋಪಿ ನವೀನ್ ಹಾಕಿದ್ದ ಪೋಸ್ಟ್ ನಿಂದಲೇ ಇಷ್ಟೆಲ್ಲಾ ರಾದ್ಧಾಂತವಾಗಿದೆ. ಶಾಂತವಾಗಿದ್ದ ಬೆಂಗಳೂರು ಹೊತ್ತಿ ಉರಿದಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ನಾಶವಾಗಿದೆ. ಹೀಗಾಗಿ ಆರೋಪಿ ಯಾವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಫೋಸ್ಟ್ ಹಾಕಿದ ಎಂಬುದು ನಿಖರವಾಗಿ ಪತ್ತೆಯಾಗಬೇಕಿದೆ ಎಂದರು.
ಅಷ್ಟೇ ಮುಖ್ಯವಾಗಿ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದ್ದು, ಸಾಕಷ್ಟು ವಿಷಯಗಳಿಗೆ ಸ್ಪಷ್ಟನೆ ಸಿಗಬೇಕಿದೆ. ತನಿಖಾ ಹಂತದಲ್ಲಿ ಆರೋಪಿಗೆ ಜಾಮೀನು ನೀಡಿದರೆ ಪೊಲೀಸರ ತನಿಖೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಗೆ ಜಾಮೀನು ನೀಡಬಾರದು ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದರು. ಮನವಿ ಪರಿಗಣಿಸಿದ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿತು.
ವಿವಾದಾತ್ಮಕ ಪೋಸ್ಟ್ ಮಾಡಿ ಘಟನೆಗೆ ಕಾರಣನಾದ ಆರೋಪಿ ನವೀನ್ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.