ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತನಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ಬೆಂಬಲಿಗ ಸಂತೋಷ್ ಕುಮಾರ್ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಸಂತೋಷ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಾನ್ ಮೈಕೆಲ್ ಕುನ್ಹ ಅವರಿದ್ದ ಪೀಠ ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. ರೋಪಿ 5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಒದಗಿಸಬೇಕು. ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಬಾರದು. ನಿಯಮಿತವಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದೆ.
ಪೀಠ ತನ್ನ ಆದೇಶದಲ್ಲಿ, ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಹೀಗಾಗಿ ಅವರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಕ್ರಮ ಜರುಗಿಸಲು ಬರುವುದಿಲ್ಲ. ಹಾಗೆಯೇ ಆರೋಪಿಯ ವಿರುದ್ಧ ಹೊರಿಸಿರುವ ಆರೋಪಗಳನ್ನು ಸಾಬೀತುಪಡಿಸುವಂತಹ ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:ಆನೆ - ಮಾನವ ಸಂಘರ್ಷ ತಡೆಗೆ ಕ್ರಮ ಕೈಗೊಳ್ಳುವಂತೆ ಲಿಂಬಾವಳಿಗೆ ಸೋಮಣ್ಣ ಪತ್ರ
ಗಲಭೆ ಪ್ರಕರಣದಲ್ಲಿ ಸಂತೋಷ್ ಕುಮಾರ್ನನ್ನು 2020ರ ಆಗಸ್ಟ್ 25ರಂದು ಪೊಲೀಸರು ಬಂಧಿಸಿದ್ದರು. ಆ ಬಳಿಕ ಸಂತೋಷ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಸಂಪತ್ ರಾಜ್ ತಲೆಮರೆಸಿಕೊಂಡಿದ್ದ ಹಿನ್ನೆಲೆ ಜಾಮೀನು ಅರ್ಜಿ ವಜಾಗೊಂಡಿತ್ತು. ಸಂಪತ್ ರಾಜ್ ಶರಣಾದ ಬಳಿಕ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲಾಗಿದೆ.