ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಳೆಗಟ್ಟಿದ್ದು, ಮಾರುಕಟ್ಟೆಯಲ್ಲಿ ಹೂ, ಹಣ್ಣು ಸೇರಿದಂತೆ ಹಬ್ಬದ ಪರಿಕರಗಳ ವ್ಯಾಪಾರ ಜೋರಾಗಿದೆ. ಸಿಹಿ ತಿನಿಸು, ಅಲಂಕಾರಿಕ ವಸ್ತುಗಳಿಗೂ ಹೆಚ್ಚಿನ ಬೇಡಿಕೆಯಿದ್ದು, ದುಬಾರಿ ದರದ ನಡುವೆಯೂ ಭರ್ಜರಿ ವಹಿವಾಟು ನಡೆಯುತ್ತಿದೆ.
ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಬಸವನಗುಡಿ, ಮಡಿವಾಳ, ಚಿಕ್ಕಪೇಟೆ, ಜಯನಗರ ಮಾರುಕಟ್ಟೆಯಲ್ಲಿ ಹೂ ಹಣ್ಣುಗಳ ಖರೀದಿ ಭರ್ಜರಿಯಾಗಿ ನಡೆದಿದೆ. ಜೊತೆಗೆ, ಪ್ರಮುಖ ರಸ್ತೆಗಳಲ್ಲಿ ಬಾಳೆಕಂದು, ಕುಂಬಳ, ಮಾವಿನೆಲೆ ಮಾರಾಟ ಮಾಡಲಾಗುತ್ತಿದೆ. ಜನರ ಖರೀದಿಯ ಭರಾಟೆ ಕೂಡ ಜೋರಾಗಿತ್ತು.
ಇದನ್ನೂ ಓದಿ :ದೇಶಾದ್ಯಂತ ದೀಪಾವಳಿ ಸಂಭ್ರಮ ; ಭಾವನಗರದಲ್ಲಿ ಸಿಹಿ ತಿಂಡಿಗಳಿಗೆ ಹೆಚ್ಚು ಬೇಡಿಕೆ
ಬೆಚ್ಚಿದ ಬೇಡಿಕೆ, ದರ ಏರಿಕೆ:ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಬಹುತೇಕ ಹೂವುಗಳ ಬೆಲೆ 10 ರಿಂದ 50 ರೂಪಾಯಿ ವರೆಗೆ ಹೆಚ್ಚಾಗಿದೆ. ಕೆ.ಜಿ ಸೇವಂತಿಗೆ 80 ರಿಂದ 150 ರೂಪಾಯಿ, ಮಲ್ಲಿಗೆ 900 ರಿಂದ 1000 ರೂ., ಕನಕಾಂಬರ 1000 ರೂ., ಸುಗಂಧರಾಜ 150 ರೂಪಾಯಿ, ಮೆರಾಬಲ್ ಗುಲಾಬಿ 180 ರಿಂದ 200 ರೂಪಾಯಿಗೆ ಹೆಚ್ಚಾಗಿರುವುದು ಕಂಡುಬಂತು. ಸೇಬು, ದಾಳಿಂಬೆ, ಕಿತ್ತಳೆ, ಏಲಕ್ಕಿ ಬಾಳೆಹಣ್ಣು, ಮೂಸಂಬಿ ಹಣ್ಣಿನ ದರವೂ ಏರಿಕೆಯಾಗಿದೆ. ದರ ಹೆಚ್ಚಿದ್ದರೂ ಕೂಡ ವಹಿವಾಟು ಜೋರಾಗಿಯೇ ಇತ್ತು.