ಬೆಂಗಳೂರು:ರಸ್ತೆ ಗುಂಡಿಗಳಿಂದ ಅಪಾರ ಸಾವು-ನೋವುಗಳಾಗಿದ್ದರೂ ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಮುಕ್ತವಾಗಿಲ್ಲ. ಹೀಗಾಗಿ ಸಾಮಾಜಿಕ ಕಾರ್ಯಕರ್ತ ಹೆಚ್.ಎಂ.ವೆಂಕಟೇಶ್ ಹಾಗು ಜೊತೆಗಾರರು ನ್ಯಾಯಾಂಗ ಬಡಾವಣೆಯ 14 ನೇ ಅಡ್ಡರಸ್ತೆಯಲ್ಲಿದ್ದ ಗುಂಡಿಗಳ ಸುತ್ತ ದೀಪ ಹಚ್ಚಿ ದೀಪಾವಳಿ ಆಚರಿಸಿದ್ದಾರೆ. ಜೊತೆಗೆ ಇಲ್ಲಿನ ನಿವಾಸಿಗಳೊಂದಿಗೆ ಸೇರಿಕೊಂಡು ಗುಂಡಿ ಮುಚ್ಚಿದ್ದಾರೆ.
ಈ ಬಗ್ಗೆ ಮಾತನಾಡಿದ, ಹೆಚ್.ಎಂ.ವೆಂಕಟೇಶ್, 'ಹಲವು ರಸ್ತೆಗಳು ಗುಂಡಿಮಯವಾಗಿ ಮಾನವ ಸಂಚಾರಕ್ಕೆ ಕಂಟಕವಾಗಿದೆ. ನ್ಯಾಯಾಂಗ ಬಡಾವಣೆ 14ನೇ ಅಡ್ಡರಸ್ತೆಯಲ್ಲಿ ಬಹಳ ದಿನಗಳಿಂದ ಬಿದ್ದ ಗುಂಡಿಯಿಂದ ಹಲವಾರು ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಗುಂಡಿ ಸುತ್ತ ದೀಪ ಹಚ್ಚಿ, ನಂತರ ಮರಳು ಸಿಮೆಂಟ್ ಮಿಶ್ರಿತ ಮಣ್ಣಿನಿಂದ ಗುಂಡಿಯನ್ನು ಮುಚ್ಚಿ, ಭ್ರಷ್ಟ ಬಿಬಿಎಂಪಿ ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದೇವೆ ಎಂದರು.