ಬೆಂಗಳೂರು: ಹಿಂಸೆ ಆಧಾರದಲ್ಲಿ ವಿಚ್ಛೇದನ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪತಿ ಆಕ್ಷೇಪಣೆ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ಅರ್ಜಿ ವಜಾಗೊಳಿಸಿ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ದಂಪತಿಗೆ ವಿಚ್ಛೇದನ ಮಂಜೂರು ಮಾಡಿ ಆದೇಶಿಸಿದೆ. ಪತಿಯಿಂದ ಹಿಂಸೆಯಾಗುತ್ತಿದೆ ಎಂದು ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪತ್ನಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ವಿಚಾರಣೆಗೆ ಪತಿ ಹಾಜರಾಗಿದ್ದರೂ, ಆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿಲ್ಲ. ಪತ್ನಿಯನ್ನು ಪಾಟಿ ಸವಾಲಿಗೆ ಒಳಪಡಿಸಿ, ಆಕೆ ಒದಗಿಸಿರುವ ಸಾಕ್ಷ್ಯಾಧಾರಗಳನ್ನೂ ಪರೀಕ್ಷಿಸಿಲ್ಲ. ಹೀಗಿದ್ದರೂ, ಪತ್ನಿಯ ಅರ್ಜಿಯನ್ನು ವಜಾಗೊಳಿಸಿರುವ ಕೌಟುಂಬಿಕ ನ್ಯಾಯಾಲಯ ಲೋಪವೆಸಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವಿಚ್ಛೇದನ ಅರ್ಜಿ ವಜಾಗೊಳಿಸಿ 2017ರ ಮಾ.27ರಂದು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ. ಜತೆಗೆ, ದಂಪತಿ ನಡುವಿನ ವಿವಾಹವನ್ನು ಅನೂರ್ಜಿತಗೊಳಿಸಿ ಆದೇಶಿಸಿದೆ.
ಅರ್ಜಿಗೆ ಸಂಬಂಧಿಸಿದಂತೆ ಪತ್ನಿ ಒದಗಿಸಿರುವ ಪುರಾವೆಗಳು ಪ್ರಶ್ನಿಸಲ್ಪಡದೇ ಹಾಗೇ ಉಳಿದಿವೆ. ಜತೆಗೆ, ಹೈಕೋರ್ಟ್ ವಿಚಾರಣೆಗೂ ಪತಿ ಹಾಜರಾಗಿಲ್ಲ ಹಾಗೂ ಪತ್ನಿಯ ಮೇಲ್ಮನವಿಯನ್ನು ವಿರೋಧಿಸಿಲ್ಲ. ನ್ಯಾಯಾಲಯದ ಮುಂದೆ ಲಭ್ಯವಿರುವ ದಾಖಲೆಗಳನ್ನು ಪರಿಗಣಿಸಿದರೆ, ಮೇಲ್ಮನವಿದಾರೆಯು ವಿವಾಹ ವಿಚ್ಛೇದನ ಪಡೆಯಲು ಅರ್ಹರಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.