ಬೆಂಗಳೂರು : ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಬಾಬು ಜಗಜೀವನ ರಾಂ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಗೊಂದಲ, ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಸಮುದಾಯದ ಕೆಲವರು ಸಮಾರಂಭದ ಮಧ್ಯೆಯೇ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಬಾಬು ಜಗಜೀವನರಾಂ ಹೆಸರಲ್ಲಿ ಪತ್ರಿಕೆಯಲ್ಲಿ ಸಣ್ಣ ಮಟ್ಟದಲ್ಲಿ ಜಾಹೀರಾತನ್ನು ಸರ್ಕಾರ ಕೊಟ್ಟಿದೆ. ಜನರಿಗೆ ಆಹ್ವಾನ ಕೊಟ್ಟಿಲ್ಲ. ಖಾಲಿ ಖುರ್ಚಿಗಳಿಗೆ ಕಾರ್ಯಕ್ರಮ ಮಾಡ್ತಿದ್ದಾರೆ ಎಂದು ಕರ್ನಾಟಕ ಆದಿ ಜಾಂಬವ ಸಂಘದಿಂದ ಆಕ್ರೋಶ ವ್ಯಕ್ತವಾಯಿತು.
ಈ ವೇಳೆ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಯಿತು. ಪೊಲೀಸರು ಅಸಮಾಧಾನಿತರನ್ನು ಸಮಾಧಾನಪಡಿಸಲು ಯತ್ನಿಸಿದರಾದರೂ ತಮ್ಮ ಗದ್ದಲವನ್ನು ಮುಂದುವರೆಸಿದರು. ಬಳಿಕ ಗದ್ದಲ ಉಂಟು ಮಾಡುತ್ತಿದ್ದ ಆದಿ ಜಾಂಬವ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಹೊರಗಡೆ ಕರೆದೊಯ್ದರು. ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಸಂದರ್ಭದಲ್ಲೂ ಆಕ್ಷೇಪ ಮುಂದುವರೆಯಿತು.