ಬೆಂಗಳೂರು:ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು, ಇದೀಗ ನಮ್ಮ ಮುಂದಿನ ಟಾರ್ಗೆಟ್ ಜಿಲ್ಲಾ ಪಂಚಾಯತ್ ಚುನಾವಣೆ ಆಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಗ್ರಾಮಗಳನ್ನು ಗೆದ್ದಾಯ್ತು, ಮುಂದಿನ ಟಾರ್ಗೆಟ್ ಜಿಲ್ಲಾ ಪಂಚಾಯತ್: ಆರ್.ಅಶೋಕ್ - ಜಿಲ್ಲಾ ಪಂಚಾಯತ್ ಚುನಾವಣೆ ಗುರಿ
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಸಚಿವ ಆರ್. ಅಶೋಕ್, ನಮ್ಮ ಮುಂದಿನ ಗುರಿ ಜಿಲ್ಲಾ ಪಂಚಾಯತ್ ಚುನಾವಣೆ ಎಂದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರೆಲ್ಲರಿಗೂ ನಾನು ನಮ್ಮ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿ, ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ನಂಬಿಕೆ ಇಟ್ಟು ಪಕ್ಷದ ಬೆಂಬಲಿತರಿಗೆ ಜನರು ಮತ ಹಾಕಿದ್ದಾರೆ. ಈ ಫಲಿತಾಂಶ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಭೂಮಿಕೆ ಆಗಿದೆ. ಮುಂದೆ ನಮ್ಮ ಟಾರ್ಗೆಟ್ ಏನಿದ್ದರೂ ಜಿಲ್ಲಾ ಪಂಚಾಯತಿ ಚುನಾವಣೆ ಎಂದರು.
ಬಿಬಿಎಂಪಿ ಚುನಾವಣೆ ತಡೆಯುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಈಗಲೂ ಬಿಬಿಎಂಪಿ ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ. ನಮಗೆ ಯಾವುದೇ ಭಯ ಇಲ್ಲ. ಈಗ ಚುನಾವಣೆ ನಡೆದರೆ ಮೂರನೇ ಎರಡರಷ್ಟು ಗೆಲುವು ಸಾಧಿಸುತ್ತೇವೆ. ಆದರೆ, ಬೆಂಗಳೂರು ಇಂದು ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ. ಹಾಗಾಗಿ ಮಹಾನಗರಕ್ಕೆ ಪ್ರತ್ಯೇಕವಾಗಿ ಕಾಯ್ದೆ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಹೊಸ ಕಾಯ್ದೆ ತರುತ್ತಿದೆ. ಇಂದೇ ಚುನಾವಣೆ ನಡೆದರೂ ಸಹ ನಾವು ಬಹುಮತದಿಂದ ಗೆಲ್ಲುತ್ತೇವೆ ಎಂದರು.