ಬೆಂಗಳೂರು :ಕೋವಿಡ್-19 ಸೋಂಕಿನಿಂದ ಮೃತರಾದವರ ವಾರಸುದಾರರಿಗೆ ಘೋಷಿಸಿರುವ ₹1 ಲಕ್ಷ ಪರಿಹಾರ ಮೊತ್ತವನ್ನು ಪಿಡಿ ಖಾತೆಯಿಂದ ಭರಿಸಲು ಡಿಸಿಗಳಿಗೆ ಅನುಮತಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್‌ನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಅರ್ಹ ಕಾನೂನು ಬದ್ಧ ವಾರಸುದಾರರಿಗೆ ₹1 ಲಕ್ಷ ಪರಿಹಾರ ಧನವನ್ನು ಸರ್ಕಾರ ಘೋಷಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಜಿಲ್ಲಾ ವಿಪತ್ತು ಪರಿಹಾರ ನಿಧಿ (DDRF) ಪಿಡಿ ಖಾತೆಯಲ್ಲಿ ಪ್ರಸ್ತುತ ಲಭ್ಯವಿರುವ ಅನುದಾನದಿಂದ ಈ ಹಣವನ್ನು ಭರಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿ ಆದೇಶಿಸಲಾಗಿದೆ.
ರಾಜ್ಯ ವಿಪತ್ತು ಪರಿಹಾರ ನಿಧಿ (SDRF)ಯಿಂದ ಜಿಲ್ಲಾಧಿಕಾರಿಗಳ ಜಿಲ್ಲಾ ವಿಪತ್ತು ಪರಿಹಾರ ನಿಧಿ (DDRF) ಪಿಡಿ ಖಾತೆಗೆ ಬಿಡುಗಡೆ ಮಾಡಲಾಗಿರುವ ಅನುದಾನದಿಂದ ಕೋವಿಡ್-19 ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ವಾರಸುದಾರರಿಗೆ ಕೋವಿಡ್ ಮರಣ ಪರಿಹಾರ ಧನವನ್ನು ಚೆಕ್ ಮೂಲಕ ವಿತರಿಸಬೇಕು.
ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಕಾನೂನು ಬದ್ಧ ವಾರಸುದಾರರಿಗೆ ಪರಿಹಾರ ಪಾವತಿಸುವ ವಿಧಾನದ ಕುರಿತು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಿ ಮುಂದಿನ ನಿರ್ದೇಶನ ನೀಡುವವರೆಗೆ ಮಾತ್ರ ಬಿಪಿಎಲ್ ಕುಟುಂಬದ ವ್ಯಕ್ತಿಗಳ ಅರ್ಹ ಕಾನೂನು ಬದ್ಧ ವಾರಸುದಾರರಿಗೆ ತಲಾ ₹1 ಲಕ್ಷ ಚೆಕ್ ಮೂಲಕ ವಿತರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಓದಿ:ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗ ಸಿ.ಎಂ. ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಸನ್ನಿಹಿತ?.. ಜೆಡಿಎಸ್ ವರಿಷ್ಠರ ತಂತ್ರಗಾರಿಕೆ ಏನು?