ಬೆಂಗಳೂರು:ಕೋವಿಡ್ ಸಂಕಷ್ಟದ ಹಿನ್ನೆಲೆ ಕಳೆದ ವರ್ಷದಂತೆ ಈ ವರ್ಷವೂ ಮುಂದಿನ ಎರಡು ತಿಂಗಳು ಪಡಿತರ ಚೀಟಿ ಹೊಂದಿಲ್ಲದವರಿಗೂ ಪಡಿತರ ಧಾನ್ಯಗಳನ್ನು ವಿತರಿಸುವ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ನಿಲುವು ತಿಳಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಹಾಗೂ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರ ಕಳೆದ ವರ್ಷ ಆತ್ಮನಿರ್ಭರ ಯೋಜನೆಯಡಿ 5 ಕೆಜಿ ಅಕ್ಕಿ ಹಾಗೂ ಒಂದು ಕೆಜಿ ಬೇಳೆ ವಿತರಿಸಿತ್ತು. ಅದೇ ರೀತಿ ಈ ಬಾರಿಯೂ ಮೇ ಮತ್ತು ಜೂನ್ ತಿಂಗಳಲ್ಲಿ ಸುಮಾರು 80 ಕೋಟಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ವ್ಯಕ್ತಿಗೆ ತಲಾ 5 ಕೆಜಿ ಅಕ್ಕಿ ವಿತರಿಸುವುದಾಗಿ ಹೇಳಿದೆ. ಆದರೆ ಇದು ಪಡಿತರ ಚೀಟಿ ಹೊಂದಿರುವವರಿಗೆ ಮಾತ್ರ.
ಇದರಿಂದಾಗಿ ಪಡಿತರ ಚೀಟಿ ಹೊಂದಿಲ್ಲದವರಿಗೆ ಆಹಾರಧಾನ್ಯ ದೊರಕುವುದಿಲ್ಲ, ಆದ್ದರಿಂದ ಅವರಿಗೂ ಸಹ ಆಹಾರ ಧಾನ್ಯ ನೀಡುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ನಿಲುವು ತಿಳಿಸಬೇಕು ಎಂದು ಪೀಠ ನಿರ್ದೇಶಿಸಿದೆ. ಅಲ್ಲದೆ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸಲು ಕಾರ್ಮಿಕ ಇಲಾಖೆ ದಾಸೋಹ ಉಚಿತ ಸಹಾಯವಾಣಿ ಪುನರಾರಂಭಿಸುವಂತೆ ಪೀಠ ಆದೇಶಿಸಿದೆ.