ಬೆಂಗಳೂರು: ಕೃಷಿ ಇಲಾಖೆಯಲ್ಲಿ ಗುಣಮಟ್ಟದ ಟಾರ್ಪಾಲಿನ್ ವಿತರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಭಾರತೀಯ ಮಾಪನ ಸಂಸ್ಥೆಯ ಪರವಾನಿಗೆಯ ಗುಣಮಟ್ಟಕ್ಕಿಂತ ಕಳಪೆ ಎಂದು ಕಂಡು ಬಂದಲ್ಲಿ ಅಂತಹ ಸಂಸ್ಥೆಗಳನ್ನು ಮುಂದಿನ ಮೂರು ವರ್ಷಗಳ ಕಾಲ ಇಲಾಖೆಯಲ್ಲಿ ಭಾಗವಹಿಸುವಿಕೆಯಿಂದ ಅನರ್ಹಗೊಳಿಸಿ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಖಡಕ್ಕಾಗಿ ಎಚ್ಚರಿಸಿದ್ದಾರೆ.
ಪರವಾನಿಗೆಯನ್ನು ಹೊಂದಿರುವ ಟಾರ್ಪಲಿನ್‌ಗಳನ್ನೇ ಸ್ವೀಕರಿಸಲು ಹಾಗೂ ವಿತರಿಸಲಾಗುತ್ತದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿರುವ ಬಿ. ಸಿ ಪಾಟೀಲ್, ಕೃಷಿ ಇಲಾಖೆಯಿಂದ ಒದಗಿಸಲಾಗಿದೆ ಎಂಬುದರ ಖಾತ್ರಿಯ ಜೊತೆಗೆ ತಯಾರಿಕ ಸಂಸ್ಥೆಯ ಹೆಸರು, ಬ್ಯಾಚ್ ಸಂಖ್ಯೆ ಮತ್ತು ಭಾರತೀಯ ಮಾಪನ ಸಂಸ್ಥೆಯ ಪರವಾನಿಗೆಯ ಸಿಎಂಎಲ್ ಸಂಖ್ಯೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಟಾರ್ಪಾಲಿನ್ ಮೇಲೆ ಲೇಜರ್ ಪ್ರಿಂಟ್ ಅಥವಾ ಅಳಿಸಲಾರದ ಷಾಹಿಯಲ್ಲಿ ಮುದ್ರಿಸಿರುವುದನ್ನು ಖಾತರಿ ಪಡಿಸಿಕೊಂಡ ನಂತರವೇ ದಾಸ್ತಾನನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸ್ವೀಕರಿಸಲಾಗುತ್ತಿದೆ.
ಸರಬರಾಜು ಆದೇಶ ಪಡೆದ ಸಂಸ್ಥೆಗಳು, ಸರಬರಾಜು ಮಾಡಿದ ಟಾರ್ಪಾಲಿನ್ಗಳಲ್ಲಿ ಜಿಲ್ಲೆಗೆ ಒಂದರಂತೆ ಮಾದರಿಯನ್ನು ತೆಗೆದು ಗುಣಮಟ್ಟದ ಪರೀಕ್ಷೆಗಾಗಿ ಸಿಐಪಿಐಟಿ ಸಂಸ್ಥೆಗೆ ಗುಣಮಟ್ಟ ಪರೀಕ್ಷೆಗಾಗಿ ಪರೀಕ್ಷಾ ಶುಲ್ಕವನ್ನು ಸರಬರಾಜುದಾರ ಸಂಸ್ಥೆಯೇ ಪಾವತಿಸುವ ಷರತ್ತಿನೊಂದಿಗೆ ಕಳುಹಿಸಲು ಸೂಚಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ ಹಾಗೂ ಇನ್ನಿತರ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಆ ಮೀ X 6 ಮೀ ಅಳತೆಯ ಟಾರ್ಪಾಲಿನ್‌ಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ .50 ಮತ್ತು ಪರಿಶಿಷ್ಟ ಜಾತಿ / ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯ ಧನ ಒದಗಿಸಿ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಿಸಲಾಗುತ್ತಿದೆ.