ಬೆಂಗಳೂರು: ಬಿಜೆಪಿಯವರು ಜನರ ಮನಸ್ಸುಗಳನ್ನು ಒಡೆಯುವುದರ ಜೊತೆಗೆ ದ್ವೇಷದ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಕಿಮ್ಸ್ ಕಾಲೇಜು ಬಂದಿದ್ದರೆ ಅದಕ್ಕೆ ಗುಂಡೂರಾವ್ ಕಾರಣ. ಅವರು ಮುಖ್ಯಮಂತ್ರಿ ಆಗಿದ್ದಾಗ ತೆಗೆದುಕೊಂಡ ನಿರ್ಧಾರದಿಂದ ಕಿಮ್ಸ್ ಬಂತು. ಅವರು ಪ್ರತಿಪಕ್ಷಗಳನ್ನು ಯಾವ ರೀತಿ ಮ್ಯಾನೇಜ್ ಮಾಡ್ತಿದ್ರು ಅನ್ನೋದನ್ನು ನಾನು ಈ ಸಂದರ್ಭದಲ್ಲಿ ಹೇಳಲ್ಲ. ಅದೇ ದೊಡ್ಡ ಸುದ್ದಿ ಆಗುತ್ತೆ. ಯೂತ್ ಕಾಂಗ್ರೆಸ್ ಮತ್ತು ಎನ್ಎಸ್ಯುಐ ಗೆ ನಾಯಕರಿಗೆ ಹೆಚ್ಚು ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದರು.
ಇದೇ ವೇಳೆ ಕೂಲಿ ಕಾರ್ಮಿಕರಿಗೆ ದುಡ್ಡು ಬಂತಾ?. ಸರ್ಕಾರದಿಂದ ಪರಿಹಾರದಿಂದ ದುಡ್ಡು ಬಂತಾ ಎಂದು ಡಿಕೆಶಿ ನೆರೆದ ಜನರನ್ನು ಕೇಳಿದರು. ಇದಕ್ಕೆ ಇಲ್ಲ ಇಲ್ಲ ಎಂದು ಕಾರ್ಯಕರ್ತರು ಉತ್ತರಿಸಿದರು. ಆಗ ಡಿಕೆಶಿ, ನಮ್ಮ ಸರ್ಕಾರ ಬಂದಾಗ ನಿಮಗೆ ಸಹಾಯ ಮಾಡ್ತೀವಿ. ನಾವು, ಸಿದ್ದರಾಮಯ್ಯ ಸದನದಲ್ಲಿ ಬಾಯಿಬಡ್ಕೊಂಡ್ರೂ ಪ್ರಯೋಜನವಾಗಲಿಲ್ಲ. ನಾಲ್ಕು ಲಕ್ಷ ಜನ ಸತ್ತರೂ ಪರಿಹಾರ ಕೊಟ್ಟಿಲ್ಲ. ರಾಮುಲು ಕೊಟ್ಟಿದ್ದೇವೆ ಎಂದು ಹೇಳಿದ್ರು. ನಾನು ಎಲ್ಲಿ ಯಾರಿಗೆ ಎಂದು ಕೇಳಿದೆ. ಬಳಿಕ ಯಡಿಯೂರಪ್ಪ ಚಾಮರಾಜನಗರದವರಿಗೆ ಬಿಟ್ರೆ ಬೇರೆ ಯಾರಿಗೂ ಹಣ ತಲುಪಿಲ್ಲ ಎಂದು ಹೇಳಿದ್ರು. ನಾವು ಮುಂದೆ ಅಧಿಕಾರಕ್ಕೆ ಬಂದೇ ಬರ್ತೀವಿ, ಆಗ ನಿಮಗೆ ಪರಿಹಾರ ಕೊಡ್ತೀವಿ ಎಂದು ಭರವಸೆ ನೀಡಿದರು.
ಬಡವರಿಗೆ ಕೊರೊನಾ ಸಂದರ್ಭದಲ್ಲಿ ಒಂದು ರೂಪಾಯಿ ಸರ್ಕಾರ ಕೊಟ್ಟಿಲ್ಲ. ಬೀದಿ ವ್ಯಾಪರಿಗಳಿಗೆ ದುಡ್ಡು ಹಾಕ್ತೀವಿ ಅಂದ್ರು. ಯಾರಿಗಾದರೂ ದುಡ್ಡು ಬಂತಾ ಎಂದ ಡಿಕೆಶಿ ಮಾತಿಗೆ ಇಲ್ಲ ಎಂದು ಮಹಿಳೆಯರು ಧ್ವನಿಗೂಡಿಸಿದರು. ಬರಿ ಸುಳ್ಳು ಹೇಳುವುದೇ ಬಿಜೆಪಿ ಕೆಲಸ. ಬಡವರು ಅಂದ್ರೆ ಕಾಂಗ್ರೆಸ್ ಪಕ್ಷದವರು. ಹಾಗಾಗಿ ಅವರಿಗ್ಯಾಕೆ ಸಹಾಯ ಮಾಡಬೇಕು ಅಂತ ಭಾವನೆ. ಹೆದರಬೇಡಿ ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತೆ. ಅವಾಗ ಕೊರೊನಾದಿಂದ ಸತ್ತವರಿಗೆ, ಸಂತ್ರಸ್ತರಿಗೆ ಪರಿಹಾರ ಕೊಡಿಸ್ತೇವೆ ಎಂದು ಸಭೆಯಲ್ಲಿ ನೆರೆದಿದ್ದ ಜನರಿಗೆ ಡಿಕೆಶಿ ಭರವಸೆ ಕೊಟ್ಟರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಐದು ಕೆಜಿ ಅಕ್ಕಿ ಉಚಿತವಾಗಿ ನೀಡ್ತಾ ಇದ್ವಿ. ಐದು ಕೆಜಿಯಿಂದ ಏಳು ಕೆಜಿ ಅಕ್ಕಿ ಕೊಟ್ವಿ. ಆದ್ರೆ ಕುಮಾರಸ್ವಾಮಿ ಸುಳ್ಳು ಹೇಳ್ತಾನೆ. ಏಳು ಕೆಜಿ ಹೆಚ್ಚಳ ಮಾಡಲು ದುಡ್ಡು ಇಟ್ಟಿರಲಿಲ್ಲ ಅಂತ. ಸಮ್ಮಿಶ್ರ ಸರ್ಕಾರದಲ್ಲಿ ದುಡ್ಡು ಇಟ್ಟಿರಲಿಲ್ಲ ಎಂದು. ನಾನು ಸಿಎಂ ಆಗಿದ್ದಾಗಲೇ ಏಳು ಕೆಜಿ ಅಕ್ಕಿ ಕೊಟ್ಟಿದ್ದೇವೆ. ಬಡವರು ಯಾರೂ ಹಸಿವಿನಿಂದ ಮಲಗಬಾರದು ಅಂತ. ಬಿಜೆಪಿಯದ್ದು ದರಿದ್ರ ಸರ್ಕಾರ. ಮಾನ ಮರ್ಯಾದೆ ಇಲ್ಲದ ಸರ್ಕಾರ. ನಿಮ್ಮ ಧಮ್ಮಯ್ಯ ಅಂತೀನಿ, ಈ ಸರ್ಕಾರ ಕಿತ್ತು ಹಾಕರಯ್ಯ ಅಂತ ಜನರಿಗೆ ಮನವಿ ಮಾಡಿದರು.