ಬೆಂಗಳೂರು: ರಾಜ್ಯದಲ್ಲಿ ಲಸಿಕಾ ಅಭಿಯಾನ ಮುಂದುವರೆದಿದ್ದು, 18 ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರಿಗೂ ಕೇಂದ್ರ ಸರ್ಕಾರದಿಂದಲೇ ಉಚಿತ ಕೋವಿಡ್ ಲಸಿಕೆ ವಿತರಣೆ ಮಾಡಲಾಗುತ್ತೆ. ನಿನ್ನೆಯಷ್ಟೇ ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದು, ಈ ಮೂಲಕ ರಾಜ್ಯ ಆರೋಗ್ಯ ಇಲಾಖೆ ಮೇಲೆ ಆರ್ಥಿಕ ಹೊರೆ ಕಡಿಮೆಯಾದಂತೆ ಆಗಿದೆ.
ಎಲ್ಲ ರಾಜ್ಯಗಳಿಗೆ ಕೇಂದ್ರವೇ ವ್ಯಾಕ್ಸಿನ್ ಪೂರೈಕೆ ಮಾಡಲಿದ್ದು, ಈ ಮೂಲಕ ಇನ್ನುಮುಂದೆ ರಾಜ್ಯವು ನೇರವಾಗಿ ಲಸಿಕೆ ಖರೀದಿ ಮಾಡುವುದನ್ನು ನಿಲ್ಲಿಸಲಿದೆ. ಅಂದಹಾಗೇ, ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯುವಂತೆ ಕೇಂದ್ರ ಸರ್ಕಾರ ಹೇಳಿತ್ತು. ಇತ್ತ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರವೇ ಉಚಿತವಾಗಿ ಪೂರೈಕೆ ಮಾಡುತ್ತಿತ್ತು. ಆದರೆ 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರದಿಂದ ಲಸಿಕೆ ಪೂರೈಕೆ ಆಗುತ್ತಿರಲಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರವೂ ಏಪ್ರಿಲ್ 22 ರಂದು ಸೀರಂ ಇನ್ಸ್ಟಿಟ್ಯೂಟ್ ನಿಂದ 400 ಕೋಟಿ ರೂ. ವೆಚ್ಚದಲ್ಲಿ 1 ಕೋಟಿ ಡೋಸ್ ಲಸಿಕೆ ಖರೀದಿಸಲು ಒಪ್ಪಿಗೆ ನೀಡಿತ್ತು.