ಬಡಜನರಿಗೆ ದಿನಸಿ ಕಿಟ್ ವಿತರಿಸಿದ ಎಸ್ಆರ್ಬಿ ಟ್ರಸ್ಟ್ - ಶಾಸಕ ಅರವಿಂದ ಲಿಂಬಾವಳಿ
ಸಂಕಷ್ಟಕ್ಕೆ ಸಿಲುಕಿರುವ ಬಡಜನರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸುತ್ತಿದ್ದು, ಎಸ್ಆರ್ಬಿ ಟ್ರಸ್ಟ್ ಬಡವರ ನೆರವಿಗೆ ಮುಂದಾಗಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೀಡಾಗಿರುವ ಮೂರು ಸಾವಿರ ಬಡ ಕುಟುಂಬಗಳಿಗೆ ಎಸ್ಆರ್ಬಿ ಟ್ರಸ್ಟ್ ವತಿಯಿಂದ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಎಸ್ಆರ್ಬಿ ಟ್ರಸ್ಟ್ ವತಿಯಿಂದ ಕಾಡುಗುಡಿ ಮತ್ತು ದಿನ್ನೂರು ಗ್ರಾಮದಲ್ಲಿ ಮೂರು ಹಂತದಲ್ಲಿ ಬಡವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಅರವಿಂದ ಲಿಂಬಾವಳಿ, ಮಾಜಿ ಸಚಿವ ಎಂಟಿಬಿ ನಾಗರಾಜ್ ಚಾಲನೆ ನೀಡಿದರು.
ನಂತರ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಸಂಕಷ್ಟಕ್ಕೆ ಸಿಲುಕಿರುವ ಬಡಜನರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸುತ್ತಿದ್ದು, ಎಸ್.ಆರ್.ಬಿ ಟ್ರಸ್ಟ್ ಬಡವರ ನೆರವಿಗೆ ಮುಂದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಕೋವಿಡ್ ಪ್ರಕರಣ ಕಂಡು ಬಂದು ಗುಣಮುಖರಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಒಂದು ಹೊಸ ಪ್ರಕರಣ ಕಂಡುಬಂದಿದೆ. ಕೋವಿಡ್-19 ನಿಯಂತ್ರಿಸಲು ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಹತೋಟಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದರು.
ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಕಾಡುಗುಡಿ ವಾರ್ಡ್ನಲ್ಲಿ ಕೂಲಿ ಕಾರ್ಮಿಕರು ಮತ್ತು ಬಿಪಿಎಲ್ ಕಾರ್ಡುಗಳು ಇಲ್ಲದ ಬಡ ಕುಟುಂಬಗಳನ್ನು ಗುರುತಿಸಿ ಎಸ್ಆರ್ಬಿ ಟ್ರಸ್ಟ್ ಅಧ್ಯಕ್ಷ ರಾಮಾಂಜೇನೆಯ ಹಾಗೂ ಮುಖಂಡರ ಸಹಕಾರದಿಂದ ಕಾಡುಗುಡಿ ಮತ್ತು ದಿನ್ನೂರು ಗ್ರಾಮದಲ್ಲಿ ದಿನಸಿ ವಿತರಿಸಲಾಗಿದೆ ಎಂದರು.
ಕೊರೊನಾ ಸೋಂಕು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿವೆ. ಹೀಗಾಗಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಎಸ್.ಆರ್.ಬಿ ಟ್ರಸ್ಟ್ ಅಧ್ಯಕ್ಷ ಕುಂಬೇನ ಅಗ್ರಹಾರ ರಾಮಾಂಜನೇಯ ಮಾತನಾಡಿ, ಹಸಿವಿನಿಂದ ಯಾರೂ ಬಳಲಬಾರದು. ಕೊರೊನಾದಿಂದ ತತ್ತರಿಸಿ ಹೋಗಿರುವ ಕುಟುಂಬಗಳಿಗೆ ನೆರವಾಗುತ್ತಿದ್ದೇವೆ ಎಂದರು.