ಕರ್ನಾಟಕ

karnataka

ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ಮೊತ್ತದ ಪರಿಹಾರ ವಿತರಿಸಿದ ಕೆಎಸ್​ಆರ್​ಟಿಸಿ

By ETV Bharat Karnataka Team

Published : Jan 1, 2024, 4:04 PM IST

Updated : Jan 1, 2024, 5:53 PM IST

ಅಪಘಾತದಲ್ಲಿ ಮೃತಪಟ್ಟ ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಸಚಿವ ರಾಮಲಿಂಗಾರೆಡ್ಡಿ ಒಂದು ಕೋಟಿ ರೂ. ಮೊತ್ತದ ಪರಿಹಾರ ಚೆಕ್​ ವಿತರಿಸಿದರು.

ವಿಮೆ ಪರಿಹಾರ ವಿತರಣೆ
ವಿಮೆ ಪರಿಹಾರ ವಿತರಣೆ

ಬೆಂಗಳೂರು: ಎಲ್ಲೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದರೆ ದುಃಖದ ಮಡುವಿನಲ್ಲಿ ಕಾಲ ದೂಡುತ್ತಿದ್ದ ಕೆಎಸ್ಆರ್​ಟಿಸಿಯ ಮೃತ ಸಿಬ್ಬಂದಿ ಕುಟುಂಬ ಸದಸ್ಯರನ್ನು ಗೌರವಿಸಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಿಗಮ ನಡೆಸಿತು. ಅಪಘಾತ ಪರಿಹಾರ ವಿಮಾ ಯೋಜನೆಯಡಿ ಒಂದು ಕೋಟಿ ರೂ.ಗಳ ಪರಿಹಾರವನ್ನು ನೀಡಿ ಅರ್ಥಪೂರ್ಣ ಬದುಕು ಕಟ್ಟಿಕೊಳ್ಳುವಂತೆ ಮಾರ್ಗದರ್ಶನ ನೀಡಲಾಯಿತು.

ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬದ ಸದಸ್ಯರೊಂದಿಗೆ 2024ನೇ ಸಾಲಿನ ಹೊಸ ವರ್ಷವನ್ನು ಆಚರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಎಲ್ಲರಿಗೂ ಶುಭಾಶಯ ಕೋರಿದರು. ಮೃತರ ಅವಲಂಬಿತರಿಗೆ ಒಂದು ಕೋಟಿ ಮೊತ್ತದ ಪರಿಹಾರ ವಿತರಿಸಿದರು.

ಮೃತ ಕೆಎಸ್​ಆರ್​ಟಿಸಿ ಸಿಬ್ಬಂದಿ ಕುಟುಂಬಸ್ಥರಿಗೆ ಪರಿಹಾರ ವಿತರಣೆ

ಶಾಂತಿನಗರದಲ್ಲಿರುವ ಕೆಎಸ್ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಅಪಘಾತದಲ್ಲಿ ಮೃತರಾಗಿದ್ದ 03 ಸಿಬ್ಬಂದಿಗಳ ಅವಲಂಭಿತ ಕುಟುಂಬವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗೌರವಿಸಿದರು. ಸೀರೆ ಮತ್ತು ಸಿಹಿಯನ್ನು ನೀಡಿ ಕುಟುಂಬ ಸದಸ್ಯರ ಅಗಲಿಕೆಯ ದುಃಖದ ನಡುವೆ ಮುಂದಿನ ಜೀವನ ಸಾಗಿಸುವಂತೆ ಧೈರ್ಯ ತುಂಬಲಾಯಿತು. ನಂತರ ತಲಾ ರೂ.1 ಕೋಟಿಯಂತೆ ಅಪಘಾತ ಪರಿಹಾರ ಮೊತ್ತವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೃತ ಅವಲಂಬಿತರ ಕುಟುಂಬದವರಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ತಮ್ಮವರನ್ನು ಕಳೆದುಕೊಂಡ ಕುಟುಂಬದವರಿಗೆ ಯಾವ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದರೆ ಆರ್ಥಿಕವಾಗಿ ಅವರಿಗೆ ಶಕ್ತಿ ಮತ್ತು ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ನಾವು ಮಾಡುತ್ತಿದ್ದೇವೆ. ಕೋಟಿ ಹಣದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಮನೆ ಮಾಡಿಕೊಂಡು ಯಾರನ್ನೂ ಅವಲಂಬಿಸದೆ ಬದುಕು‌ ನಡೆಸಬಹುದಾಗಿದೆ ಎಂದರು.

ಮೃತ ಕೆಎಸ್​ಆರ್​ಟಿಸಿ ಸಿಬ್ಬಂದಿ ಕುಟುಂಬಸ್ಥರಿಗೆ ಪರಿಹಾರ ವಿತರಣೆ

ಸಾರಿಗೆ ಸುರಕ್ಷಾ ಅಪಘಾತ ವಿಮಾ ಪರಿಹಾರ ಯೋಜನೆ:ನಿಗಮದಲ್ಲಿ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅದೇ ರೀತಿ, ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಅಂಗನ್ಯೂನ್ಯತೆಗೆ ಒಳಗಾದಲ್ಲಿ ಸಿಬ್ಬಂದಿಗಳಿಗೆ ಹೆಚ್ಚಿನ ಮೊತ್ತದ ಆರ್ಥಿಕ ಪರಿಹಾರ ಒದಗಿಸುವ ಮೂಲಕ ಅವರ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯೊಂದಿಗೆ ರೂ.50 ಲಕ್ಷ ಹಾಗೂ SBIನ Corporate Salary Package ಅಡಿಯಲ್ಲಿ ರೂ.50 ಲಕ್ಷ ನೀಡಲಾಗುತ್ತಿದೆ.

ಈ ಯೋಜನೆ ಅಡಿಯಲ್ಲಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟ ನೌಕರರ ನಾಮನಿರ್ದೇಶಿತರಿಗೆ ಒಟ್ಟು ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ನೀಡಲಾಗುತ್ತದೆ. ಸಾರಿಗೆ ನಿಗಮಗಳಲ್ಲಿ ದೇಶದಲ್ಲಿಯೇ ಈ ಯೋಜನೆಯನ್ನು ಪ್ರಥಮ ಬಾರಿಗೆ ಕ.ರಾ.ರ.ಸಾ ನಿಗಮದಲ್ಲಿ ಜಾರಿಗೊಳಿಸಲಾಗಿತ್ತು. ‌ನಂತರ ಇತರೆ ನಿಗಮಗಳಲ್ಲಿಯೂ ಜಾರಿಗೆಗೊಳಿಸಲಾಗಿದೆ.

ಮೃತ ಕೆಎಸ್​ಆರ್​ಟಿಸಿ ಸಿಬ್ಬಂದಿ ಕುಟುಂಬಸ್ಥರಿಗೆ ಪರಿಹಾರ ವಿತರಣೆ

ಈ ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಈವರೆಗೆ 09 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ. ಇಂದು 3ಜನ ನೌಕರರ ಅವಲಂಬಿತರಿಗೆ ರೂ.1 ಕೋಟಿ ರೂ. ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಯಿತು.

ಮೃತ ಸಿಬ್ಬಂದಿ ವಿವರ;1. ಬಿ.ಎಂ ಪುಟ್ಟಸ್ವಾಮಿ, ಚಾಲಕ, ಬಿ.ಸಂ:1272, ವಿಜಯನಗರ ಘಟಕ, ಮೈಸೂರು ವಿಭಾಗ, ಅವರು ದಿನಾಂಕ: 25.01.2023 ರಂದು ದ್ವಿಚಕ್ರ ವಾಹನದಲ್ಲಿ ಹೋಗುವಾಗ ಕಾರಿನ ಮಧ್ಯೆ ನಡೆದ ಖಾಸಗಿ ಅಪಘಾತದಲ್ಲಿ ಮರಣ ಹೊಂದಿದ್ದರು. ಸದರಿ ಅವರು 26 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು, ಪತ್ನಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದರು. ಇವರ ಕುಟುಂಬಕ್ಕೆ ಅಪಘಾತ ವಿಮಾ ಯೋಜನೆಯ ರೂ. 1 ಕೋಟಿ ಹಾಗೂ ಉಪದಾನ, ಭವಿಷ್ಯ ನಿಧಿ, ರಜೆ ನಗದೀಕರಣ, ನೌಕರರ ಕುಟುಂಬ ಕಲ್ಯಾಣ ಯೋಜನೆ, DRBF, ಗುಂಪು ವಿಮಾ ಯೋಜನೆ ಇತ್ಯಾದಿಗಳಿಂದ ರೂ 18.74 ಲಕ್ಷ.

2. ಅಶೋಕ್ ಕುಮಾರ್, ಚಾಲಕ, ಬಿ.ಸಂ:5957, ಧರ್ಮಸ್ಥಳ ಘಟಕ, ಪುತ್ತೂರು ವಿಭಾಗ, ರವರು ದಿನಾಂಕ: 24.05.2023 ರಂದು ದ್ವಿಚಕ್ರ ವಾಹನದಲ್ಲಿ ಹೋಗುವಾಗ ಕಾರಿನ ನಡುವೆ ನಡೆದ ಖಾಸಗಿ ಅಪಘಾತದಲ್ಲಿ ಮೃತಪಟ್ಟಿದ್ದರು. ಸದರಿರವರು 12 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಇವರ ಕುಟುಂಬಕ್ಕೆ ಅಪಘಾತ ವಿಮಾ ಯೋಜನೆಯ ರೂ. 1 ಕೋಟಿ ಹಾಗೂ ಉಪದಾನ, ಭವಿಷ್ಯ ನಿಧಿ, ರಜೆ ನಗದೀಕರಣ, ನೌಕರರ ಕುಟುಂಬ ಕಲ್ಯಾಣ ಯೋಜನೆ, DRBF, ಗುಂಪು ವಿಮಾ ಯೋಜನೆ ಇತ್ಯಾದಿಗಳಿಂದ ರೂ. 21.01 ಲಕ್ಷ.

3. ರಮೇಶ ಜಿ, ಚಾಲಕ-ಕಂ-ನಿರ್ವಾಹಕ, ಬಿ.ಸಂ:4619, ಘಟಕ-5, ಬೆಂಗಳೂರು ಕೇಂದ್ರೀಯ ವಿಭಾಗ, ಅವರು ದಿನಾಂಕ: 28.06.2023 ರಂದು ಎಲೆಕ್ಟ್ರಿಕ್ ವಾಹನ ಸಂಖ್ಯೆ ಕೆ.ಎ -51 ಎಜೆ 0538 ರಲ್ಲಿ ಮಡಿಕೇರಿ-ಬೆಂಗಳೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಸದರಿರವರು 20 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು, ಪತ್ನಿ ಹಾಗೂ ಒಬ್ಬ ಮಗನನ್ನು ಹೊಂದಿದ್ದರು. ಇವರ ಕುಟುಂಬಕ್ಕೆ ಉಪದಾನ, ಭವಿಷ್ಯ ನಿಧಿ, ರಜೆ ನಗದೀಕರಣ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಗುಂಪು ವಿಮಾ ಯೋಜನೆ ಇತ್ಯಾದಿಗಳಿಂದ ರೂ. 24.81 ಲಕ್ಷ‌ ನೀಡಲಾಯಿತು.

ಇದನ್ನೂ ಓದಿ:2024 'ಪ್ರಯಾಣಿಕ ಸ್ನೇಹಿ ವರ್ಷ'; ನಗದುರಹಿತ UPI ಸೇವೆ ಘೋಷಿಸಿದ ಕೆಎಸ್ಆರ್​ಟಿಸಿ

Last Updated : Jan 1, 2024, 5:53 PM IST

ABOUT THE AUTHOR

...view details